ರೈತರ ಸಾಗುವಳಿ ಭೂಮಿ, ಕಾಂಪೌಂಡ್ ಏಕಾಏಕಿ ತೆರವು: ಅರಣ್ಯ ಇಲಾಖೆ ವಿರುದ್ಧ ಮಾಜಿ ಸಚಿವ ಹರತಾಳು ಹಾಲಪ್ಪ ತೀವ್ರ ಆಕ್ರೋಶ
Former minister Haratalu Halappa protests against the Forest Department over alleged sudden removal of farmers’ cultivated land and compound wall at H. Hunsavalli in Hosanagara taluk.
ರಿಪ್ಪನ್‌ಪೇಟೆ : ಯಾವುದೇ ಮುನ್ಸೂಚನೆ ನೀಡದೆ ಅರಣ್ಯ ಇಲಾಖೆ ಸಿಬ್ಬಂದಿ ರೈತರ ಸಾಗುವಳಿ ಭೂಮಿ ಹಾಗೂ ವಾಸದ ಮನೆಯ ಕಾಂಪೌಂಡ್ ತೆರವುಗೊಳಿಸಿರುವುದನ್ನು ಖಂಡಿಸಿ, ಮಾಜಿ ಸಚಿವ ಹರತಾಳು ಹಾಲಪ್ಪ ನೇತೃತ್ವದಲ್ಲಿ ಮಂಗಳವಾರ ಹೊಸನಗರ ವಲಯ ಅರಣ್ಯಾಧಿಕಾರಿಗಳ ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಯಿತು. ಕಚೇರಿ ಎದುರಿನ ಧರಣಿ ಬಳಿಕ ಅಧಿಕಾರಿಗಳೊಂದಿಗೆ ಹರತಾಳು ಗ್ರಾಮದ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವರು ಇಲಾಖೆಯ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಘಟನೆಯ ಹಿನ್ನೆಲೆ:
ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಚ್. ಹುಣಸವಳ್ಳಿ ಗ್ರಾಮದ ಸರ್ವೆ ನಂ. 43ರಲ್ಲಿ ರವೀಂದ್ರ ಹಾಗೂ ಕಲ್ಯಾಣಮೂರ್ತಿ ಎಂಬುವರು ಹಲವು ವರ್ಷಗಳಿಂದ ವಾಸವಿದ್ದಾರೆ. ಮಂಗಳವಾರ ಇವರ ನಿವಾಸದ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಕೇವಲ ಮೂರ್ನಾಲ್ಕು ಗುಂಟೆ ಜಾಗದಲ್ಲಿದ್ದ ಮನೆಯ ಪಾಯ (ಫೌಂಡೇಶನ್) ಹಾಗೂ ತಡೆಗೋಡೆಯನ್ನು (ಕಾಂಪೌಂಡ್) ನೆಲಸಮಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ರಾಜ್ಯದಲ್ಲೊಂದು, ಹೊಸನಗರದಲ್ಲೊಂದು ಸರ್ಕಾರವಿದೆಯೇ?
“ವಿಧಾನಸೌಧದಲ್ಲಿ ರೈತರ ಸಮಸ್ಯೆಗಳ ಕುರಿತು ವಿಶೇಷ ಅಧಿವೇಶನ ನಡೆಯುತ್ತಿದೆ. ಹಳೆಯ ಒತ್ತುವರಿಯನ್ನು ತೆರವು ಮಾಡುವುದಿಲ್ಲ ಎಂದು ಶಾಸಕರು ಭರವಸೆ ನೀಡುತ್ತಿದ್ದಾರೆ. ಆದರೆ ಇಲ್ಲಿ 15-20 ವರ್ಷಗಳ ಹಿಂದಿನ ಒತ್ತುವರಿಯನ್ನು ಏಕಾಏಕಿ ತೆರವು ಮಾಡಲಾಗುತ್ತಿದೆ. ರಾಜ್ಯದಲ್ಲೊಂದು ಸರ್ಕಾರವಿದ್ದರೆ, ಹೊಸನಗರದಲ್ಲೇ ಮತ್ತೊಂದು ಸರ್ಕಾರವಿದೆಯೇ? ಒಂದೇ ರಾಜ್ಯದಲ್ಲಿ ಎರಡು ಕಾನೂನುಗಳಿವೆಯೇ?” ಎಂದು ಹಾಲಪ್ಪ ಕಿಡಿಕಾರಿದರು. ಇಂತಹ ಅಮಾನವೀಯತೆಯನ್ನು ಸಹಿಸಲು ಸಾಧ್ಯವಿಲ್ಲ ಎಂದ ಅವರು, ಇನ್ಮುಂದೆ ಯಾರದೇ ಸಾಗುವಳಿ ಜಮೀನು ತೆರವುಗೊಳಿಸಲು ಮುಂದಾದರೂ ನೂರಾರು ಕಾರ್ಯಕರ್ತರೊಂದಿಗೆ ಸ್ಥಳದಲ್ಲೇ ಉಗ್ರ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆ ಅಂತ್ಯ:
ಸ್ಥಳಕ್ಕಾಗಮಿಸಿದ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸಿ, ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಅಧಿಕಾರಿಗಳ ಆಶ್ವಾಸನೆ ಮೇರೆಗೆ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು.
ಪ್ರತಿಭಟನೆಯಲ್ಲಿ ಪ್ರಮುಖರಾದ ಬೆಳಗೋಡು ಗಣಪತಿ, ಆರ್.ಟಿ. ಗೋಪಾಲ್, ಯುವರಾಜ್ , ಮಲ್ಲಿಕಾರ್ಜುನ, ಅಭಿಲಾಷ್ ಗೌಡ, ಮೆಣಸೆ ಆನಂದ್, ಸುಂದರೇಶ್ , ಮಹಮ್ಮದ್ ಹುಸೇನ್ , ಗಣೇಶ್ ಕುಕ್ಕಳಲೆ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.