ರಸ್ತೆಯಲ್ಲಿ ಸಿಕ್ಕ ಚಿನ್ನದ ಉಂಗುರ ವಾರಸುದಾರರಿಗೆ ಹಸ್ತಾಂತರ: ಆಶಾ ನರಸಿಂಹ ಅವರ ಪ್ರಾಮಾಣಿಕತೆಗೆ ಸಾರ್ವಜನಿಕರ ಮೆಚ್ಚುಗೆ! | Canara Bank employee Asha Narasimha from Koduru, Hosanagara, wins public appreciation for honestly returning a lost gold ring to its rightful owner, Malathi Santosh.
ಹೊಸನಗರ: ರಸ್ತೆಯಲ್ಲಿ ಬಿದ್ದಿದ್ದ ಚಿನ್ನದ ಉಂಗುರವನ್ನು ಅದರ ನಿಜವಾದ ವಾರಸುದಾರರನ್ನು ಪತ್ತೆಹಚ್ಚಿ ಮರಳಿಸುವ ಮೂಲಕ ಹೊಸನಗರ ತಾಲೂಕಿನ ಕೋಡೂರು ಕೆನರಾ ಬ್ಯಾಂಕ್ ಶಾಖೆಯ ಸಿಬ್ಬಂದಿ ಆಶಾ ನರಸಿಂಹ ಅವರು ಪ್ರಾಮಾಣಿಕತೆ ಹಾಗೂ ಮಾನವೀಯತೆಯನ್ನು ಮೆರೆದಿದ್ದಾರೆ.
ಆಶಾ ನರಸಿಂಹ ಅವರು ಎಂದಿನಂತೆ ಕರ್ತವ್ಯಕ್ಕೆಂದು ಬ್ಯಾಂಕ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ಚಿನ್ನದ ಉಂಗುರವೊಂದು ಬಿದ್ದಿರುವುದನ್ನು ಗಮನಿಸಿದ್ದಾರೆ. ತಕ್ಷಣ ಉಂಗುರವನ್ನು ಸುರಕ್ಷಿತವಾಗಿ ತೆಗೆದುಕೊಂಡ ಅವರು, ಅದರ ನಿಜವಾದ ಮಾಲೀಕರನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.
ತಮ್ಮ ಪ್ರಯತ್ನದ ಮೂಲಕ ಉಂಗುರದ ವಾರಸುದಾರರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಆಶಾ ನರಸಿಂಹ ಅವರು, ಬಳಿಕ ಬಸ್ ನಿಲ್ದಾಣದ ಸಮೀಪ ಅಂಗಡಿ ನಡೆಸುತ್ತಿರುವ ಮಾಲತಿ ಸಂತೋಷ್ ಅವರಿಗೆ ಚಿನ್ನದ ಉಂಗುರವನ್ನು ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ.
ಕೋಡೂರು ಕೆನರಾ ಬ್ಯಾಂಕ್ ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ನರಸಿಂಹ ಅವರು ಮೂಲತಃ ರಿಪ್ಪನ್‌ಪೇಟೆಯ ನಿವಾಸಿಯಾಗಿದ್ದು, ಹೊಸನಗರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ತ.ಮ. ನರಸಿಂಹ ಅವರ ಪತ್ನಿಯಾಗಿದ್ದಾರೆ.
ಬ್ಯಾಂಕ್‌ಗೆ ಬರುವ ಪ್ರತಿಯೊಬ್ಬ ಗ್ರಾಹಕರೊಂದಿಗೂ ನಗುಮುಖದಿಂದ ಆತ್ಮೀಯವಾಗಿ ವರ್ತಿಸುವ ಮೂಲಕ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿರುವ ಆಶಾ ನರಸಿಂಹ ಅವರು, ಇದೀಗ ತಮ್ಮ ಪ್ರಾಮಾಣಿಕ ನಡೆ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.
ಕಳೆದುಹೋದ ಚಿನ್ನದ ಉಂಗುರವನ್ನು ಮರಳಿಸುವ ಮೂಲಕ ಕರ್ತವ್ಯದ ಜೊತೆಗೆ ಮಾನವೀಯ ಮೌಲ್ಯಗಳಿಗೂ ಮಹತ್ವ ನೀಡಿರುವ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಹಾಗೂ ಬ್ಯಾಂಕ್ ಗ್ರಾಹಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
