ವಿದ್ಯಾರ್ಥಿಗಳ ಕಾಲೇಜು ಪ್ರಯಾಣದ ಸಂಕಷ್ಟಕ್ಕೆ ಶಾಸಕ ಬೇಳೂರು ಸ್ಪಂದನೆ: ಸಾರಿಗೆ ಇಲಾಖೆಯಿಂದ ಹೊಸ ಬಸ್ ವ್ಯವಸ್ಥೆ | Sagar MLA Gopalakrishna Beluru responds to students’ transport issues by facilitating a new government bus service on the Sagar-Bhatkal route, benefiting students from Kogaru and nearby villages.
ಸಾಗರ: ಸಾಗರ ತಾಲೂಕಿನ ಕೋಗಾರು ಭಾಗದ ವಿದ್ಯಾರ್ಥಿಗಳು ಎದುರಿಸುತ್ತಿದ್ದ ಬಹುದಿನಗಳ ಸಾರಿಗೆ ಸಮಸ್ಯೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸ್ಪಂದಿಸಿದ್ದು, ಸಾಗರ-ಭಟ್ಕಳ ಮಾರ್ಗದಲ್ಲಿ ಹೊಸ ಸರ್ಕಾರಿ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಸಾಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ನಿತಿನ್ ಕುಮಾರ್ ಚಂಡೇಮನೆ ಅವರ ನೇತೃತ್ವದಲ್ಲಿ ಕೋಗಾರು, ಚೆನ್ನಗಾರು, ಕಾನೂರು, ಅರಳಗೋಡು, ಸಂಪ, ಭೀಮೇಶ್ವರ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ವಿದ್ಯಾರ್ಥಿಗಳು ಸೋಮವಾರ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಮನವಿ ಸಲ್ಲಿಸಿದ್ದರು.
ಈ ಭಾಗದ ವಿದ್ಯಾರ್ಥಿಗಳು ಪದವಿ ಶಿಕ್ಷಣ ಪಡೆಯಲು ಪ್ರತಿನಿತ್ಯ ಸುಮಾರು 50 ಕಿ.ಮೀ. ದೂರ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಆದರೆ, ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಇಲ್ಲದಿರುವುದು ಹಾಗೂ ಸಂಚರಿಸುತ್ತಿದ್ದ ಕೆಲವು ಬಸ್‌ಗಳು ನಿಲುಗಡೆ ನೀಡದಿರುವುದರಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದರು.
ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ವಿದ್ಯಾರ್ಥಿಗಳು ಪ್ರತಿನಿತ್ಯ ಕಾಲೇಜಿಗೆ ತೆರಳಲು ಎದುರಿಸುತ್ತಿದ್ದ ಸಾರಿಗೆ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತರಲಾಗಿತ್ತು.
ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಸಾಗರ-ಭಟ್ಕಳ ಮಾರ್ಗದಲ್ಲಿ ಹೊಸ ಸರ್ಕಾರಿ ಬಸ್ ಸಂಚಾರಕ್ಕೆ ಸಾರಿಗೆ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಾಸಕರ ಸೂಚನೆಯಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಹೊಸ ಬಸ್ ಸೇವೆ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಹೊಸ ಬಸ್ ಸೇವೆಯಿಂದ ಕೋಗಾರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಕಾಲೇಜಿಗೆ ತೆರಳಲು ಅನುಕೂಲವಾಗಲಿದೆ. ವಿದ್ಯಾರ್ಥಿಗಳ ಮನವಿಗೆ ತ್ವರಿತವಾಗಿ ಸ್ಪಂದಿಸಿ ಸಾರಿಗೆ ವ್ಯವಸ್ಥೆ ಕಲ್ಪಿಸಿದ ಶಾಸಕರು ಹಾಗೂ ಸಾರಿಗೆ ನಿಗಮದ ಅಧಿಕಾರಿಗಳ ಕ್ರಮಕ್ಕೆ ಸ್ಥಳೀಯರು ಮತ್ತು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.
