ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿ ಜಾತ್ರೆಗೆ ಭಕ್ತಸಾಗರ: ವಿಶೇಷ ಪೂಜೆ, ಹರಕೆ ಸಮರ್ಪಣೆ | Devotees thronged the historic Ammanaghatta Jenukallamma Devi temple near Ripponpete in Shivamogga district for the grand annual fair, offering special prayers and agricultural produce.
ರಿಪ್ಪನ್‌ಪೇಟೆ: ಸಮೀಪದ ಇತಿಹಾಸ ಪ್ರಸಿದ್ಧ ಅಮ್ಮನಘಟ್ಟದ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ಭಕ್ತಿಭಾವ ಹಾಗೂ ವೈಭವದಿಂದ ನೆರವೇರಿತು.
ಪಿತೃಪಕ್ಷದ ಅವಧಿಯಲ್ಲಿ ನಡೆಯುವ ಜಾತ್ರೆಯ ಮೊದಲ ಮಂಗಳವಾರದಂದು ಮುಂಜಾನೆಯಿಂದಲೇ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಅಮ್ಮನಘಟ್ಟಕ್ಕೆ ಆಗಮಿಸಿ ಜೇನುಕಲ್ಲಮ್ಮ ದೇವಿಯ ದರ್ಶನ ಪಡೆದರು.
ದೇವಾಲಯದಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ವಿಶೇಷ ಪೂಜೆ ಸಲ್ಲಿಸಿ, ಹಣ್ಣು-ಕಾಯಿ ಸಮರ್ಪಿಸಿ ಹರಕೆಗಳನ್ನು ನೆರವೇರಿಸಿದರು. ಮಲೆನಾಡಿಗರ ಆರಾಧ್ಯ ದೈವವೆಂದೇ ಪ್ರಸಿದ್ಧವಾಗಿರುವ ಜೇನುಕಲ್ಲಮ್ಮ ದೇವಿಯ ಜಾತ್ರೆಯಲ್ಲಿ ಸರ್ವಜನಾಂಗದ ಭಕ್ತರು ಪಾಲ್ಗೊಂಡು ದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
ವಿವಾಹ, ಸಂತಾನ ಸೇರಿದಂತೆ ವಿವಿಧ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ದೊರೆಯಲಿ ಎಂಬ ನಂಬಿಕೆಯಿಂದ ಹಲವರು ದೇವಿಗೆ ಹರಕೆ ಹೊತ್ತು ಪೂಜೆ ಸಲ್ಲಿಸಿದರು.
ರೈತರು ತಮ್ಮ ಜಮೀನಿನಲ್ಲಿ ಬೆಳೆದ ಅಡಿಕೆ, ಶುಂಠಿ ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳನ್ನು ದೇವಿಗೆ ಸಮರ್ಪಿಸಿ, ಬೆಳೆಗಳಿಗೆ ರೋಗ-ರುಜಿನ ಬಾರದಂತೆ ಹಾಗೂ ಉತ್ತಮ ಇಳುವರಿ ದೊರೆಯುವಂತೆ ಪ್ರಾರ್ಥಿಸಿದರು. ಮಳೆಯ ಕೊರತೆ ಎದುರಾಗದಿರಲಿ ಹಾಗೂ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿ ಎಂದು ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬೆಳಗ್ಗಿನಿಂದಲೇ ದೇವಾಲಯದ ಸುತ್ತಮುತ್ತ ಭಕ್ತರ ಸಂಚಾರ ಹೆಚ್ಚಾಗಿದ್ದು, ಜೇನುಕಲ್ಲಮ್ಮ ದೇವಿಯ ದರ್ಶನಕ್ಕಾಗಿ ಭಕ್ತ ಜನಸಾಗರವೇ ಹರಿದುಬಂದಿತ್ತು. ಪೂಜಾ ಕೈಂಕರ್ಯಗಳು, ಹರಕೆ ಸಮರ್ಪಣೆ ಹಾಗೂ ಭಕ್ತರ ಧಾರ್ಮಿಕ ಆಚರಣೆಗಳೊಂದಿಗೆ ಜಾತ್ರಾ ಮಹೋತ್ಸವವು ಸಂಭ್ರಮದಿಂದ ನಡೆಯಿತು.