Police’s massive crackdown on drug addicts: Do you know how many cases were registered in two months?!?
ಮಾದಕ ವ್ಯಸನಿಗಳ ಜಾಲದ ವಿರುದ್ದ ಪೊಲೀಸರ ಭರ್ಜರಿ ಭೇಟೆ : ಎರಡು ತಿಂಗಳಲ್ಲಿ ದಾಖಲಾದ ಪ್ರಕರಣಗಳೆಷ್ಟು ಗೊತ್ತಾ..!!??
Police’s massive crackdown on drug addicts: Do you know how many cases were registered in two months?!?
ಶಿವಮೊಗ್ಗ : ಜಿಲ್ಲೆಯಾದ್ಯಂತ ಮಾದಕ ವಸ್ತುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ವಿಶೇಷ ಕಾರ್ಯಾಚರಣೆ (ಸ್ಪೆಷಲ್ ಡ್ರೈವ್) ನಡೆಸಿದೆ.
ಈ ಕಾರ್ಯಾಚರಣೆಯಲ್ಲಿ ಒಟ್ಟು 177 ಮಾದಕ ವಸ್ತು ಸಂಬಂಧಿತ ಪ್ರಕರಣಗಳನ್ನು ದಾಖಲಿಸಿ, ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನವೆಂಬರ್ ತಿಂಗಳಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು 82 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಗಾಂಜಾ ಸೇವನೆ ಮಾಡಿದ 76 ಜನ ಆರೋಪಿತರ ವಿರುದ್ಧ NDPS ಕಾಯ್ದೆಯ 27(b) ಸೆಕ್ಷನ್ ಅಡಿ 74 ಪ್ರಕರಣಗಳು ದಾಖಲಾಗಿವೆ. ಜೊತೆಗೆ ಗಾಂಜಾ ಮಾರಾಟ, ಸಾಗಾಟ ಹಾಗೂ ಹಸಿ ಗಾಂಜಾ ಬೆಳೆಯುತ್ತಿದ್ದ 12 ಜನ ಆರೋಪಿತರ ವಿರುದ್ಧ NDPS ಕಾಯ್ದೆಯ 8(c), 20(b), 20(a) ಸೆಕ್ಷನ್‌ಗಳ ಅಡಿ 8 ಪ್ರಕರಣಗಳು ದಾಖಲಿಸಲಾಗಿದೆ. ಈ ಅವಧಿಯಲ್ಲಿ 4,91,500 ರೂ. ಮೌಲ್ಯದ 4 ಕೆಜಿ 476 ಗ್ರಾಂ ಒಣ ಗಾಂಜಾ, 370 ಗ್ರಾಂ ಹಸಿ ಗಾಂಜಾ ಹಾಗೂ 26 ಗ್ರಾಂ MDMA ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಸಹ ವಿಶೇಷ ಕಾರ್ಯಾಚರಣೆ ಮುಂದುವರಿದಿದ್ದು, ಒಟ್ಟು 95 ಪ್ರಕರಣಗಳು ದಾಖಲಾಗಿವೆ. ಗಾಂಜಾ ಸೇವನೆ ಮಾಡಿದ 90 ಜನ ಆರೋಪಿತರ ವಿರುದ್ಧ NDPS ಕಾಯ್ದೆಯ 27(b) ಸೆಕ್ಷನ್ ಅಡಿ 86 ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಗಾಂಜಾ ಮಾರಾಟ ಮತ್ತು ಸಾಗಾಟದಲ್ಲಿ ತೊಡಗಿದ್ದ 15 ಜನ ಆರೋಪಿತರ ವಿರುದ್ಧ NDPS ಕಾಯ್ದೆಯ 8(c), 20(b) ಸೆಕ್ಷನ್‌ಗಳ ಅಡಿ 9 ಪ್ರಕರಣಗಳು ದಾಖಲಿಸಲಾಗಿದೆ. ಈ ತಿಂಗಳಲ್ಲಿ 4,51,500 ರೂ. ಮೌಲ್ಯದ 8 ಕೆಜಿ 969 ಗ್ರಾಂ ಒಣ ಗಾಂಜಾ ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲೆಯಲ್ಲಿ ಮಾದಕ ವಸ್ತುಗಳ ನಿರ್ಮೂಲನೆಗೆ ಮುಂದೆಯೂ ಇಂತಹ ವಿಶೇಷ ಕಾರ್ಯಾಚರಣೆಗಳನ್ನು ನಿರಂತರವಾಗಿ ನಡೆಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.