HOSANAGARA | ತಾಲೂಕಿನ ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ

ಹೊಸನಗರ : ಸಂವಿಧಾನವು ದೇಶದ ಬೆನ್ನೆಲುಬು, ಅದನ್ನು ಅರಿಯುವುದು ನಮ್ಮೆಲ್ಲರ ಕರ್ತವ್ಯ ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆ ಓದುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ನೈರ್ಮಲ್ಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಇಲ್ಲಿನ ಬಸ್ ನಿಲ್ದಾಣದ ಆವರಣದಲ್ಲಿ ಶುಕ್ರವಾರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಡಿಯಲ್ಲಿ ನಡೆಯಲಿರುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಹಿತಕಾಯುತ್ತಿದೆ. ನೂತನವಾಗಿ 5300 ಸರಕಾರಿ ಬಸ್‌ಗಳನ್ನು ಬಿಡಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸುಮಾರು 500 ಶಾಲೆಗಳನ್ನು ಮೇಲ್ದರ್ಜೆಗೇರಿಸಿ ಕೆಪಿಎಸ್ ಶಾಲೆಗಳನ್ನಾಗಿಸಲಾಗುವುದು ಎಂದರು.

ಶಾಸಕರು ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಮಲೆನಾಡು ಭಾಗದಲ್ಲಿ ಕುಡಿವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಂಡಿದೆ. ಮುಂದಿನ ವರ್ಷದೊಳಗೆ 1150 ಫಲಾನುಭವಿಗಳ ಮನೆಗೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ಈ ವರ್ಷ ಬರಗಾಲ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಬಹುದು ನೀರಿನ ಬಗ್ಗೆ ಗ್ರಾಮ ಪಂಚಾಯತಿಗಳಿಗೆ ಈಗಾಗಲೇ ಸುತ್ತೋಲೆಗಳನ್ನು ಕಳುಹಿಸಲಾಗಿದೆ ಜಲಜೀವನ್ ಮೀಷನ್ ಯೋಜನೆಯಡಿಯಲ್ಲಿ ನೀರು ಸರಬರಾಜು ಮಾಡುತ್ತಿದ್ದು ಇನ್ನೂ ನೀರಿಗೆ ಬರಗಾಲವಾದರೆ ಬಾವಿ, ಬೋರ್‌ವೇಲ್ ಹಾಗೂ ಟ್ಯಾಂಕರ್ ಮೂಲಕ ನೀರು ಕೊಡಲು ಸರ್ಕಾರ ಸಿದ್ದವಿದೆ ಯಾರು ಹೆದರುವುದು ಬೇಡ. ಸರ್ಕಾರ ನಿಮ್ಮ ಜೊತೆಗಿದ್ದು ಹಂಡೆ ಸ್ನಾನ ಮಾಡುವುದನ್ನು ಬಿಡಿ ನೀರನ್ನು ಮಿತವಾಗಿ ಬಳಸಿ ಮುಂದಿನ ವರ್ಷ ನೀವು ಕೇಳಿದಷ್ಟು ನೀರು ಕೊಡಲು ನಾವು ಸಿದ್ದವಿದ್ದೇವೆ ಎಂದರು.

ಶಾಸಕ ಆರಗ ಜ್ಞಾನೇಂದ್ರ ಹಾಗೂ ಆರ್ ಎಂ ಮಂಜುನಾಥ್ ಗೌಡ ಸಭೆಯನ್ನುದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಬಗರ್‌ಹುಕುಂ ಸಮಿತಿ ಸದಸ್ಯ ನೇರಲೆ ಸ್ವಾಮಿ, ತಹಸೀಲ್ದಾರ್ ರಶ್ಮಿ ಹಾಲೇಶ್, ತಾಪಂ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಕುಡಿಯುವ ನೀರು ಇಲಾಖೆಯ ಕಾರ್ಯಪಾಲಕ ಇಂಜಿನಿಯರ್‌ ರಾಜೇಂದ್ರ ಪ್ರಸಾದ್, ಪಟ್ಟಣ ಪಂಚಾಯಿತಿ ಸದಸ್ಯರಾದ ಗುರುರಾಜ್, ಅಶ್ವಿನಿಕುಮಾರ್, ಶಾಹೀನಾ, ಹಾಲಗದ್ದೆ ಉಮೇಶ್, ಕೃಷ್ಣವೇಣಿ, ಶಾಸಕರ ಆಪ್ತ ಕಾರ್ಯದರ್ಶಿಗಳಾದ ಸಣ್ಣಕ್ಕಿ ಮಂಜು, ಬಸವರಾಜ್, ಮತ್ತಿತರರು ಇದ್ದರು.

Leave a Reply

Your email address will not be published. Required fields are marked *