ರಿಪ್ಪನ್ಪೇಟೆ : ಇಲ್ಲಿನ ಸಮೀಪದ ಮಳವಳ್ಳಿ ಗ್ರಾಮದಲ್ಲಿ ಶಾಲಾ ಸಮಯದಲ್ಲೇ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇಲೆ ಭಾರಿ ಮರವೊಂದು ಉರುಳಿಬಿದ್ದರೂ ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದ ಘಟನೆ ನಡೆದಿದೆ.
ಮಳವಳ್ಳಿ ಗ್ರಾಮದ ಶಾಲೆಯ ಪಕ್ಕದಲ್ಲಿದ್ದ ದೊಡ್ಡಗಾತ್ರದ ಮರ ಉರುಳಿ ಬಿದ್ದ ಪರಿಣಾಮ ಶಾಲೆಯ ಎರಡು ಛಾವಣಿ ಸಂಪೂರ್ಣ ಹಾನಿಯಾಗಿದೆ.
ಇಂದು ಮೂಗೂಡ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮವಿದ್ದ ಹಿನ್ನಲೆಯಲ್ಲಿ ಶಾಲೆಗೆ ಬಂದಿದ್ದ ಎಲ್ಲಾ ಮಕ್ಕಳನ್ನು ಬೆಳಿಗ್ಗೆ 9.30 ರ ಸಮಯಕ್ಕೆ ಮೂಗೂಡ್ತಿ ಶಾಲೆಗೆ ಕರೆದೊಯ್ಯಲಾಗಿತ್ತು.ಬೆಳಿಗ್ಗೆ 10.00 ಗಂಟೆಗೆ ಬೃಹತ್ ಮರವು ಶಾಲೆಯ ಮೇಲೆ ಬಿದ್ದಿದೆ.ಇದರಿಂದ ಯಾವುದೇ ದುರ್ಘಟನೆ ನಡೆಯಲಿಲ್ಲ.
ಮರ ಬಿದ್ದ ರಭಸಕ್ಕೆ ಎರಡು ಕೊಠಡಿಯ ಮೇಲ್ಚಾವಣಿ ಸಂಪೂರ್ಣ ಹಾನಿಯಾಗಿದ್ದು.ಶಾಲೆಯ ಕಾಂಪೌಂಡ್ ಗೆ ಹಾನಿಯಾಗಿದೆ.
ಇದೇ ಶಾಲೆಯ ಪಕ್ಕದಲ್ಲಿ ಇನ್ನೂ ನಾಲ್ಕೈದು ಭಾರಿ ಗಾತ್ರದ ಹಳೆಯ ಮರವಿದ್ದು ಅದನ್ನು ತೆರವುಗೊಳಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಬೇಕಾಗಿದೆ.
ಸ್ಥಳಕ್ಕೆ ತಾಪಂ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ,ಜಿಲ್ಲಾ ನೋಡಲ್ ಅಧಿಕಾರಿ ಶ್ರೀಕಾಂತ್ , ಗ್ರಾಪಂ ಸದಸ್ಯ ಚಂದ್ರಶೇಖರ್ ,ಪಿಡಿಓ ರಾಘವೇಂದ್ರ ಭೇಟಿ ನೀಡಿ ಪರಿಶೀಲಿಸಿದ್ದಾರೆ.