ಕನ್ನಡದ ಖ್ಯಾತ ಲೇಖಕಿ ಕಮಲಾ ಹಂಪನ ನಿಧನ – ಕಂಬನಿ ಮಿಡಿದ ಕನ್ನಡ ಸಾಹಿತ್ಯ ಲೋಕ |
ಕನ್ನಡ ಸಾಹಿತ್ಯ ಲೋಕದ ಮತ್ತೊಂದು ಕೊಂಡಿ ಕಳಚಿದೆ. ಖ್ಯಾತ ಲೇಖಕಿ ಕಮಲಾ ಹಂಪನ ಇಂದು (22-06-2024) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಕನ್ನಡ ಸಾಹಿತ್ಯ ಲೋಕದಲ್ಲಿ ಕಮಲಾ ಹಂಪನ ಲೇಖಕಿಯಾಗಿ ಹೆಸರು ಮಾಡಿದ್ದಾರೆ. ಪ್ರಾಧ್ಯಾಪಕರಾಗಿ, ಬಹಳಷ್ಟು ಪ್ರಾಚೀನ ಕೃತಿಗಳ ಅನುಸಂಧಾನಕಾರರಾಗಿ ಸೇವೆ ಸಲ್ಲಿಸಿದ್ದಾರೆ.
ಕನ್ನಡ ಸಾಹಿತ್ಯ ಲೋಕದ ಎಲ್ಲಾ ಪ್ರಕಾರಗಳಲ್ಲೂ ಆಳವಾದ ಅಧ್ಯಯನ ಮಾಡಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಕಮಲಾ ಹಂಪನ ಅವರು ನೀಡಿರುವ ಕೊಡುಗೆ ಬಹಳ ಮಹತ್ವವಾದದ್ದು.
ಬೆಂಗಳೂರಿನ ದೇವನಹಳ್ಳಿಯಲ್ಲಿ 1931ರ ಅಕ್ಟೋಬರ್ 28ರಂದು ಶ್ರೀರಂಗಧಾಮ ನಾಯಕ್ ಮತ್ತು ಲಕ್ಷ್ಮಮ ದಂಪತಿಯ ಪುತ್ರಿಯಾಗಿ ಕಮಲ ಹಂಪನಾ ಜನಿಸಿದರು.
ತುಮಕೂರು ಮತ್ತು ಮೈಸೂರಿನಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿ 1956ರಲ್ಲಿ ಕನ್ನಡ ಅಧ್ಯಾಪಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ಬೆಂಗಳೂರು ಮತ್ತು ಮೈಸೂರು ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಬೆಂಗಳೂರಿನ ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದರು.
ನಿವೃತ್ತರಾದ ಮೇಲೆ ಮೈಸೂರು ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾನಿಲಯಗಳಲ್ಲಿ ಸೇವೆ ಸಲ್ಲಿಸಿದ್ದರು. ತಮ ಅಧ್ಯಯನ, ಅಧ್ಯಾಪನ, ಲೇಖನ, ಭಾಷಣ ಮತ್ತು ಸಂಶೋಧನೆಗಳಿಂದ 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡುತ್ತಾ ಬಂದಿದ್ದ ಪ್ರೊ.ಕಮಲಾ ಹಂಪನಾ ಅವರು ಸಮಕಾಲೀನ ಕನ್ನಡ ಸಾಹಿತ್ಯದ ಹಿರಿಯ ಬರಹಗಾರ್ತಿಯಾಗಿದ್ದಾರೆ.
ಅವರ ಧೀರ್ಘಕಾಲಿಕ ಹಾಗೂ ಮೌಲಿಕ ಕೊಡುಗೆಗೆ ಸಂದ ಗೌರವಗಳಲ್ಲಿ ಪ್ರಮುಖವಾದುವು ಮೂಡುಬಿದರೆಯಲ್ಲಿ ನಡೆದ ಅಖಿಲ ಭಾರತ 71ನೇ ಕನ್ನಡ ಸಾಹಿತ್ಯ ಸಮೇಳನದ ಅಧ್ಯಕ್ಷತೆ, ಸರ್ಕಾರದ ಪುರಸ್ಕಾರವಾದ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡಮಾಡುವ ನಾಡೋಜ ಪ್ರಶಸ್ತಿ.
ಡಾ.ಕಮಲಾ ಹಂಪನಾ ಅವರ ಬರವಣಿಗೆಯ ಹರಹು ದೊಡ್ಡದು. ಅವರ ಸಮಗ್ರ ಸಾಹಿತ್ಯವನ್ನು ಒಳಗೊಂಡ ಒಂಬತ್ತು ಬೃಹತ್ ಸಂಪುಟಗಳು ಹೊರಬಂದಿವೆ. ಸಂಶೋಧನೆ ಅವರ ಮೊದಲ ಆಯ್ಕೆ. ಪ್ರಕಟವಾದ 60ಕ್ಕೂ ಹೆಚ್ಚು ಕೃತಿಗಳಲ್ಲಿ ಸೃಜನಶೀಲ ಕೃತಿಗಳೂ ಸೇರಿವೆ.
ನಾಟಕ, ಕತೆಗಳು ಮತ್ತು ವಚನಗಳಲ್ಲಿ ಸೃಷ್ಟಿಶಕ್ತಿಯ ವಿನ್ಯಾಸ ಕೆನೆಕಟ್ಟಿದೆ. ಬಿಂದಲಿ, ಬುಗುಡಿ ಹಾಗೂ ಬಯಲು ಇವು ಆಧುನಿಕ ವಚನಗಳಿರುವ ಸಂಕಲನಗಳು. ಇವಲ್ಲದೆ ಹಾಗೂ ಅತ್ತಿಮಬ್ಬೆ ಅಂಡ್ ಚಾಲುಕ್ಯಾಸ್ ಹಾಗೂ ಜೈನಿಸಮ್ ಅಂಡ್ ಅದರ್ ಎಸ್ಸೇಸ್ ಎಂಬ ಎರಡು ಇಂಗ್ಲಿಷ್ ಪುಸ್ತಕಗಳನ್ನು ರಚಿಸಿದ್ದಾರೆ.
ಜೀವಪರ ಸಂವೇದನೆ, ಸಾಮಾಜಿಕ ಬದ್ಧತೆ, ಸಾಂಸೃತಿಕ ಕಾಳಜಿಯನ್ನು ಪ್ರಭಾವಶಾಲಿಯಾಗಿ ಬಿಂಬಿಸುವ ಕಮಲಾ ಹಂಪನಾ ಕನ್ನಡದ ಹೆಮೆ. ಕರ್ನಾಟಕ ಸರ್ಕಾರ ಅವರ ಕುರಿತ ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಿದೆ. ಜಗತ್ತಿನ ಆಯ್ದು ಆದರ್ಶ ಜೋಡಿಗಳನ್ನು ಆಧರಿಸಿ ಜರ್ಮನಿಯ ಯಾಸೇಮಿನ್ ನಿರ್ದೇಶಿಸಿರುವ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರದಲ್ಲಿ ಇಡೀ ಭಾರತದ ಪರವಾಗಿ ಕಮಲಾ-ಹಂಪನಾ ಜೋಡಿ ಆಯ್ಕೆಯಾಗಿ ಸೇರಿರುವುದು. ಇವೆಲ್ಲದಕ್ಕೂ ಕಿರೀಟಪ್ರಾಯವಾಗಿದೆ.
ಕಮಲ ಹಂಪನಾ ಪಟ್ಟ ಶ್ರಮ, ನಡೆಸಿದ ನಿರಂತರ ಹೋರಾಟ, ಮಾಡಿದ ಸಾಧನೆಗಳು ಹಲವಾರು. ಅವರ ಪರಿಶ್ರಮದ ಫಲವಾಗಿ ಕರ್ನಾಟಕ ಸರ್ಕಾರ ಪ್ರತಿವರ್ಷ ಲೇಖಕಿಯೊಬ್ಬರಿಗೆ ಮೂರು ಲಕ್ಷ ನಗದನ್ನೂ ಒಳಗೊಂಡ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಯನ್ನು ನೀಡುತ್ತಿದೆ.
ಅವರ ಪ್ರಯತ್ನದಿಂದಲೇ ಮಹಿಳಾ ವಿಶ್ವವಿದ್ಯಾಲಯ ಸಾಕಾರಗೊಂಡಿತು. ವೀರಮಹಿಳೆ ರಾಣಿ ಅಬ್ಬಕ್ಕದೇವಿಯ ಪ್ರತಿಮೆ ಪ್ರತಿಷ್ಠಾಪನೆಗೊಂಡಿತು. ಬೇರು ಬೆಂಕಿ ಬಿಳಲು ಬೃಹತ್ ಗ್ರಂಥ ಕಮಲಾ ಹಂಪನಾ ಅವರ ಜೀವನಯಾನದ ಹೃದಯಸ್ಪರ್ಶಿ ಸಂಕಥನವಾಗಿದೆ.
ಕಮಲಾ ಹಂಪನಾ ಅವರು 60 ವರ್ಷಗಳಕಾಲ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಮಾಡಿದ್ದಾರೆ. ನಕ್ಕಿತು ಹಾಲಿನ ಬಟ್ಟಲು, ರೆಕ್ಕೆ ಮುರಿದಿತ್ತು, ಚಂದನಾ, ಬಣವೆ, ಸಂಶೋಧನಾ ಕೃತಿಗಳಾದ ತುರಂಗ ಭಾರತ – ಒಂದು ಅಧ್ಯಯನ, ಶಾಂತಿನಾಥ, ಆದರ್ಶ ಜೈನ ಮಹಿಳೆಯರು, ಅನೇಕಾಂತವಾದ, ನಾಡು ನುಡಿ ನಾವು, ಜೈನ ಸಾಹಿತ್ಯ ಪರಿಸರ, ಬದ್ದವಣ, ರೋಣದ ಬಸದಿ ಸೇರಿ ಹಲವು ಕಥಾ ಕವನ ಸಂಕಲನಗಳು, ಶಿಶು ಸಾಹಿತ್ಯ, ಅನುವಾದಗಳು, ಕಾದಂಬರಿಗಳನ್ನು ಕನ್ನಡ ಸಾಹಿತ್ಯ ಪ್ರಿಯರಿಗಾಗಿ ಕೊಡುಗೆ ನೀಡಿದ್ದಾರೆ.
ಕನ್ನಡ ಸಾಹಿತ್ಯ ಲೋಕಕ್ಕೆ ಕಮಲಾ ಹಂಪನ ನೀಡಿರುವ ಕೊಡುಗೆಗಾಗಿ ಅವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಾಬಾ ಆಮ್ಟೆ ರಾಷ್ಟ್ರೀಯ ಪ್ರಶಸ್ತಿ, ಸಾಹಿತ್ಯ ವಿಶಾರದೆ ಪ್ರಶಸ್ತಿ, ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ವರ್ಷದ ಲೇಖಕಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ದಾನ ಚಿಂತಾಮಣಿ ಪ್ರಶಸ್ತಿ, ಟೊರೆಂಟೋ, ವ್ಯಾಂಕೊವರ್, ಲಾಸ್ ಏಂಜಲಿಸ್, ಬ್ರಿಟನ್ ಮುಂತಾದ ವಿದೇಶಿ ಪುರಸ್ಕಾರ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಒಲಿದುಬಂದಿವೆ.
ಕೃತಿಗಳು :
ಕಥಾಸಂಕಲನ, ನಕ್ಕಿತು ಹಾಲಿನ ಬಟ್ಟಲು, ರೆಕ್ಕೆ ಮುರಿದಿತ್ತು, ಚಂದನಾ, ಬಣವೆ.
ಸಂಶೋಧನೆ :
ತುರಂಗ ಭಾರತ – ಒಂದು ಅಧ್ಯಯನ
ಶಾಂತಿನಾಥ, ಆದರ್ಶ ಜೈನ ಮಹಿಳೆಯರು, ಅನೇಕಾಂತವಾದ, ನಾಡು ನುಡಿ ನಾವು, ಜೈನ ಸಾಹಿತ್ಯ ಪರಿಸರ, ಬದ್ದವಣ, ರೋಣದ ಬಸದಿ
ವಿಮರ್ಶೆ-ವೈಚಾರಿಕ :
ಬಾಸಿಂಗ, ಬಾಂದಳ, ಬಡಬಾಗ್ನಿ, ಬಿತ್ತರ, ಬೊಂಬಾಳ, ಗುಣದಂಕಕಾರ್ತಿ ಅತ್ತಿಮಬ್ಬೆ, Attimabbe and Chalukyas
ಸಂಪಾದನೆ :
ಸುಕುಮಾರ ಚರಿತೆಯ ಸಂಗ್ರಹ, ಭರತೇಶ ವೈಭವ,
ಕೆ.ಎಸ್.ಧರಣೇಂದ್ರಯ್ಯನವರ ಸ್ಮೃತಿಗ್ರಂಥ, ಶ್ರೀ ಪಚ್ಚೆ
ಸಹಸ್ರಾಭಿಷೇಕ, ಚಾವುಂಡರಾಯ ಪುರಾಣ, ಡಾ.ಡಿ.ಎಲ್.ನರಸಿಂಹಾಚಾರ್ ರ ಆಯ್ದ ಲೇಖನಗಳು, ಹಳೆಯ ಗದ್ಯ ಸಾಹಿತ್ಯ, ದಾನಚಿಂತಾಮಣಿ – ಸ್ಮರಣಸಂಚಿಕೆ, ಜೈನಧರ್ಮ, ಸುವರ್ಣ ಭಾರತಿ, ಸಂಪುಟ – 3
ಜೈನಕಥಾಕೋಶ (ಸಹ ಸಂಪಾದಕಿ), ಷೋಡಶ ಭಾವಾನಾ ಕಾವ್ಯ
ಜೀವನ ಪರಿಚಯ :
ಮಹಾವೀರರ ಜೀವನ ಸಂದೇಶ, ಮುಡಿಮಲ್ಲಿಗೆ, ಆ ಮುಖ
ವಚನ ಸಂಕಲನ :
ಬಿಂದಲಿ, ಬುಗುಡಿ,
ಶಿಶು ಸಾಹಿತ್ಯ :
ಅಕ್ಕ ಮಹಾದೇವಿ, ಹೆಳವನಕಟ್ಟೆ ಗಿರಿಯಮ್ಮ, ವೀರವನಿತೆ ಓಬವ್ವ, ಜನ್ನ, ಚಿಕ್ಕವರಿಗಾಗಿ ಚಿತ್ರದುರ್ಗ, ಡಾ.ಬಿ.ಆರ್.ಅಂಬೇಡ್ಕರ್, ಮುಳಬಾಗಿಲು ಮಕ್ಕಳೊಡನೆ ಮಾತುಕತೆ
ಅನುವಾದ :
ಬೀಜಾಕ್ಷರ ಮಾಲೆ(ಸರಸ್ವತಿ ಬಾಯಿಗಿರಿಯವರು ತೆಲುಗಿನಲ್ಲಿ ಬರೆದಿರುವ ೬೫ ಪದ್ಯಗಳ ಭಾವಾನುವಾದ), ಜಾತಿ ನಿರ್ಮೂಲನೆ (ಡಾ.ಅಂಬೇಡಕರರವರ Annihilation of caste ಕೃತಿಯ ಅನುವಾದ), ಭಾರತದಲ್ಲಿ ಜಾತಿಗಳು, ಏಷಿಯಾದ ಹಣತೆಗಳು, ಜಾತಿಮೀಮಾಂಸೆ
ಆಕಾಶವಾಣಿ ನಾಟಕ – ರೂಪಕಗಳು :
ಬಕುಳ, ಬಾನಾಡಿ, ಬೆಳ್ಳಕ್ಕಿ, ಕಾದಂಬರಿ, ಶರ್ಮಿಳಾ