ರಿಪ್ಪನ್ಪೇಟೆ: ಅಕ್ರಮವಾಗಿ ಕಡಿದ ಲಕ್ಷಾಂತರ ರೂ ಮೌಲ್ಯದ 24 ಸಾಗುವಾನಿ ತುಂಡುಗಳು ಅರಣ್ಯಾಧಿಕಾರಿಗಳ ವಶಕ್ಕೆ | Forest officials seize 24 pieces of illegally felled teak wood worth approximately ₹4 lakh in Belandur village near Ripponpete, Shivamogga district.
ರಿಪ್ಪನ್ಪೇಟೆ: ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಂದೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಡಿದಿದ್ದ ಸುಮಾರು ₹4 ಲಕ್ಷ ಮೌಲ್ಯದ ಸಾಗುವಾನಿ ಮರದ ನಾಟವನ್ನು ಅರಸಾಳು ವಲಯ ಅರಣ್ಯಾಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.
ಬೆಳಂದೂರು ಗ್ರಾಮದ ಸರ್ವೆ ನಂಬರ್ 51ರ ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ಸಾಗುವಾನಿ ಮರಗಳನ್ನು ಅಕ್ರಮವಾಗಿ ಕಡಿದಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅರಸಾಳು ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಅಕ್ರಮವಾಗಿ ಕಡಿದಿದ್ದ ಸಾಗುವಾನಿ ಮರದ 24 ತುಂಡುಗಳು ಪತ್ತೆಯಾಗಿವೆ. ಇವುಗಳ ಒಟ್ಟು ಉದ್ದ ಸುಮಾರು 100 ಅಡಿ ಎಂದು ಅಂದಾಜಿಸಲಾಗಿದ್ದು, ವಶಪಡಿಸಿಕೊಂಡ ಮರದ ನಾಟದ ಮೌಲ್ಯ ಸುಮಾರು ₹4 ಲಕ್ಷ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅರಸಾಳು ವಲಯ ಅರಣ್ಯಾಧಿಕಾರಿ ಶರಣಪ್ಪ, ಉಪ ವಲಯ ಅರಣ್ಯಾಧಿಕಾರಿಗಳಾದ ಸುನಿಲ್ ಮತ್ತು ಕುಮಾರ್ ಮಾಂಗ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.
