ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನಡೆದ ಈದ್ ಮಿಲಾದ್ ಮೆರವಣಿಗೆ

ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನಡೆದ ಈದ್ ಮಿಲಾದ್ ಮೆರವಣಿಗೆ

Shivamogga witnessed a grand and peaceful Eid Milad procession with green decorations, flags, tableaux and festive lighting, under tight police security.

ಶಿವಮೊಗ್ಗ: ಪ್ರವಾದಿ ಮೊಹಮ್ಮದ್ ಅವರ ಜನ್ಮದಿನದ ಸ್ಮರಣಾರ್ಥ ಆಚರಿಸಲಾಗುವ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲಿ ಬುಧವಾರ ಸಡಗರದ ವಾತಾವರಣ ಕಂಡುಬಂದಿತು. ನಗರದ ವಿವಿಧ ಭಾಗಗಳಿಂದ ಆಗಮಿಸಿದ ಮುಸ್ಲಿಂ ಬಾಂಧವರು ಅದ್ದೂರಿ ಮೆರವಣಿಗೆಯಲ್ಲಿ ಪಾಲ್ಗೊಂಡರು.

ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳನ್ನು ಹಸಿರು ತೋರಣ, ಹಸಿರು ಬಾವುಟಗಳು ಹಾಗೂ ವಿವಿಧ ಬಣ್ಣಗಳ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಪ್ರಮುಖ ಸ್ಥಳಗಳಲ್ಲಿರುವ ಟಿಪ್ಪು ಸುಲ್ತಾನ್ ಅವರ ಪ್ರತಿಮೆಗಳ ಸುತ್ತಲೂ ವಿಶೇಷ ಅಲಂಕಾರ ಮಾಡಲಾಗಿದ್ದು, ರಾತ್ರಿ ವೇಳೆಯಲ್ಲಿ ವಿದ್ಯುತ್ ದೀಪಗಳ ಬೆಳಕಿನಲ್ಲಿ ನಗರ ಕಂಗೊಳಿಸಿತು.

ಈದ್ ಮಿಲಾದ್ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಕಂಡುಬಂದ ಹಸಿರು ಅಲಂಕಾರ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.

ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ನಿಖಿಲ್ ಅವರ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

ವಿವಿಧ ಭಾಗಗಳಿಂದ ಮೆರವಣಿಗೆ

ಮಧ್ಯಾಹ್ನ ಸುಮಾರು 3 ಗಂಟೆಗೆ ಆರಂಭವಾದ ಮೆರವಣಿಗೆ ಸಂಜೆ 6 ಗಂಟೆಯವರೆಗೆ ನಗರದ ವಿವಿಧ ಭಾಗಗಳಿಂದ ಆಗಮಿಸಿತು. ಸುಮಾರು 25ಕ್ಕೂ ಹೆಚ್ಚು ಮೆರವಣಿಗೆ ತಂಡಗಳು ಹಂತ ಹಂತವಾಗಿ ನಗರಕ್ಕೆ ಆಗಮಿಸಿ ಮುಖ್ಯ ಮೆರವಣಿಗೆಯಲ್ಲಿ ಸೇರಿಕೊಂಡವು.

ಆರ್‌ಎಂಎಲ್ ನಗರ, ಹಳೆ ಮಂಡ್ಲಿ, ಹೊಸ ಮಂಡ್ಲಿ, ತುಂಗಾನಗರ, ಆಜಾದ್ ನಗರ, ಇಲಿಯಾಸ್ ನಗರ, ಸೂಳೆಬೈಲು, ವಾದಿ ಹುಧಾ ಸೇರಿದಂತೆ ವಿವಿಧ ಬಡಾವಣೆಗಳಿಂದ ಹಾಗೂ ಗ್ರಾಮೀಣ ಪ್ರದೇಶಗಳಿಂದ ಯುವಕರು ಟ್ಯಾಬ್ಲೋಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು.

ವಿವಿಧ ಮಸೀದಿಗಳು ಹಾಗೂ ಮದರಸಾಗಳ ಮೌಲ್ವಿಗಳು, ಮಕ್ಕಳು ಮತ್ತು ಯುವಕರು ಖುರಾನ್ ಪದ್ಯಗಳನ್ನು ರಾಗಬದ್ಧವಾಗಿ ಪಠಿಸುತ್ತಾ ಸಾಗಿದರು. ಕೆಲವೆಡೆ ಧ್ವನಿವರ್ಧಕಗಳಲ್ಲಿ ಕೇಳಿಬಂದ ಸಂಗೀತದ ಬೀಟ್‌ಗಳಿಗೆ ಯುವಕರು ನೃತ್ಯ ಮಾಡುತ್ತಾ ಮೆರವಣಿಗೆಯ ಸಂಭ್ರಮ ಹೆಚ್ಚಿಸಿದರು.

ಆರ್‌ಎಂಎಲ್ ನಗರ, ಹಳೆ ಮಂಡ್ಲಿ, ಹೊಸ ಮಂಡ್ಲಿ, ತುಂಗಾನಗರ ಸೇರಿದಂತೆ ವಿವಿಧ ಭಾಗಗಳಿಂದ ಹೊರಟ ಮೆರವಣಿಗೆ ತಂಡಗಳು ಎನ್‌ಟಿ ರಸ್ತೆ ಹಾಗೂ ಓಟಿ ರಸ್ತೆಯ ಮೂಲಕ ಅಮೀರ್ ಅಹಮದ್ ವೃತ್ತಕ್ಕೆ ಆಗಮಿಸಿದವು. ಮತ್ತೊಂದೆಡೆ ಟ್ಯಾಂಕ್ ಮೊಹಲ್ಲಾ ಹಾಗೂ ಶಾಂತಿನಗರ ಭಾಗಗಳಿಂದ ಬಂದ ತಂಡಗಳು ಬಾಲರಾಜ ಅರಸ್ ರಸ್ತೆ ಮತ್ತು ಗೋಪಿ ವೃತ್ತದ ಮೂಲಕ ಅಮೀರ್ ಅಹಮದ್ ವೃತ್ತದಲ್ಲಿ ಸೇರಿಕೊಂಡವು.

ಒಟ್ಟಾರೆ ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಮೆರವಣಿಗೆ ಶಾಂತಿಯುತವಾಗಿ ನಡೆಯಿತು.

About The Author