ತೀರ್ಥಹಳ್ಳಿ : ಮಂಗಳೂರು ಜಿಲ್ಲೆಯ ಮೂಲ್ಕಿ ಪಟ್ಟಣದ ಬಳಿ ಟ್ಯಾಂಕರ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತೀರ್ಥಹಳ್ಳಿಯ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಎಲೆಕ್ಟ್ರಿಷಿಯನ್ ಅಕ್ಬರ್ ಭಾಷ ಹಾಗೂ ಅವರ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ತೀರ್ಥಹಳ್ಳಿ ಕೋಳಿಕಾಲು ಗುಡ್ಡೆ ನಿವಾಸಿ, ದಂಪತಿ ಅಕ್ಬರ್ ಪಾಶ(61) ಹಾಗೂ ಖತೀಜಾಬಿ(46) ಮೃತಪಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡು ಮೂಲ್ಕಿ ಸೇತುವೆಯಲ್ಲಿ ಈ ಘಟನೆ ನಡೆದಿದ್ದು, ಆಕ್ಟೀವ ವಾಹನವು ರಸ್ತೆಯಲ್ಲಿ ಸ್ಕಿಡ್ ಆಗಿ ಬಿದ್ದಿದ್ದು, ಈ ವೇಳೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಟ್ಯಾಂಕರ್ ಇಬ್ಬರ ತಲೆಯ ಮೇಲೆ ಹರಿದ ಪರಿಣಾಮ ತೀರ್ಥಹಳ್ಳಿ ಮೂಲದ ದಂಪತಿಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಅಕ್ಬರ್ ಭಾಷ ತೀರ್ಥಹಳ್ಳಿ ಪಟ್ಟಣ ಪಂಚಾಯತಿಯ ಮಾಜಿ ಸದಸ್ಯರು ಆಗಿದ್ದರು ಹಾಗೂ ಮುಸ್ಲಿಂ ಒಕ್ಕೂಟದ ತಾಲೂಕು ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಇತ್ತೀಚಿಗೆ ವಿದ್ಯುತ್ ಗುತ್ತಿಗೆದಾರರ ಸಂಘದಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಇವರ ಸಾವಿನ ಸುದ್ದಿ ತಿಳಿದು ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ರೆಹಮಾತುಲ್ಲ ಅಸಾದಿ,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.