ರಿಪ್ಪನ್‌ಪೇಟೆ : ಸರ್ಕಾರಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ|volleyball

ರಿಪ್ಪನ್‌ಪೇಟೆ : ಬೆಂಗಳೂರಿನಲ್ಲಿ ನಡೆದ 14 ವರ್ಷದ ಒಳಗಿನ ಪ್ರಾಥಮಿಕ ಶಾಲಾ ಕ್ರೀಡಾಕೂಟದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತರಾಗಿ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಪಟ್ಟಣದ ಶಿವಮೊಗ್ಗ ರಸ್ತೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಪ್ರೀತಮ್ ಮತ್ತು ಗಣೇಶ್ ಕೆ ಎನ್ ಆಯ್ಕೆಯಾಗಿದ್ದಾರೆ.




ಬೆಂಗಳೂರಿನ ನಾಗಸಂದ್ರದಲ್ಲಿ ನಡೆದ ರಾಜ್ಯಮಟ್ಟದ 14 ವರ್ಷದೊಳಗಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಅತ್ಯದ್ಭುತ ಪ್ರದರ್ಶನ ತೋರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಪಟ್ಟಣದ ದೊಡ್ಡಿನಕೊಪ್ಪ ನಿವಾಸಿ ಭೀಮರಾಜ್ ಮತ್ತು ರೇಣುಕಾ ದಂಪತಿಗಳ ಪುತ್ರನಾದ ಪ್ರೀತಮ್ ಸರ್ಕಾರಿ ಶಾಲೆಯಲ್ಲಿ 7 ನೇ ತರಗತಿ ವ್ಯಾಸಂಗ ಮಾಡುತಿದ್ದಾನೆ.ಈತನಿಗೆ ಈತನ ತಂದೆಯಾದ ಭೀಮರಾಜ್  ತರಬೇತಿ ನೀಡಿದ್ದಾರೆ.




ಅರಸಾಳು ಸಮೀಪದ ಕೊಳವಂಕ ನಿವಾಸಿ ನಾರಾಯಣಪ್ಪ ಮತ್ತು ಯಶೋಧ ದಂಪತಿಗಳ ಪುತ್ರನಾದ ಗಣೇಶ್ ಕೆ ಎನ್ ಪಟ್ಟಣದ ಸರ್ಕಾರಿ ಶಾಲೆಯಲ್ಲಿ 7 ನೇ ತರಗತಿ ವ್ಯಾಸಂಗ ಮಾಡುತಿದ್ದಾರೆ.

ಬಡತನದ ಬೇಗೆಯಿಂದ ಬಳಲುತ್ತಿರುವ ಈ ಮಕ್ಕಳಿಗೆ ಉತ್ತಮ ಪ್ರತಿಭೆ ಇದ್ದು ಮಕ್ಕಳ ಪ್ರತಿಭೆಯನ್ನು ಮತ್ತಷ್ಟು ಉತ್ತಮಪಡಿಸಿ ಅವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ದಿಸೆಯಲ್ಲಿ ಇವರಿಗೆ ಸುಸಜ್ಜಿತ ಮೈದಾನ, ತರಬೇತಿ ಮತ್ತು ಪ್ರೋತ್ಸಾಹ ನೀಡಬೇಕಾಗಿದೆ.

ಉತ್ತಮ ದರ್ಜೆಯ ಜೆರ್ಸಿ, ಶೂ ,ನೀ ಕ್ಯಾಪ್ ಹಾಕಿಕೊಂಡು ಆಡುವ ಖಾಸಗಿ ಶಾಲೆಯ ಕ್ರೀಡಾಪಟುಗಳ ಎದುರು ಬರಿಗಾಲಿನಲ್ಲಿ ಆಟವಾಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವುದು ಸುಲಭದ ಮಾತಲ್ಲ….ಅಂತಹದನ್ನು ನಮ್ಮೂರಿನ ಯುವ ಪ್ರತಿಭೆಗಳು ಸಾಧಿಸಿ ತೋರಿಸಿವೆ.

ಕ್ರೀಡೆಗೆ ಬೇಕಾದ ಸೂಕ್ತ ಉಡುಪು, ಸಾಮಗ್ರಿಗಳು ಇಲ್ಲದೆ ಇರುವುದು ಈ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಾಗದೇ ಬಲಾಡ್ಯ ತಂಡಗಳ ಎದುರು ಉತ್ತಮ‌ಪ್ರದರ್ಶನ ನೀಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ನಮ್ಮೂರಿನ ಹೆಮ್ಮೆ.

ಮಲೆನಾಡಿನಲ್ಲಿಯೇ ವಾಲಿಬಾಲ್ ನ ತವರು ಎಂದೇ ಪ್ರಖ್ಯಾತವಾಗಿರುವ ರಿಪ್ಪನ್‌ಪೇಟೆಯಲ್ಲಿ ಅತ್ಯದ್ಭುತ ರೀತಿಯಲ್ಲಿ ವಾಲಿಬಾಲ್ ಪ್ರತಿಭೆಗಳು ಹೊರ ಹೊಮ್ಮುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.


ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಯುವ ಪ್ರತಿಭೆಗಳಿಗೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿ ಶೈಲಾ ಮತ್ತು ಹಿರಿಯ ವಾಲಿಬಾಲ್ ಕ್ರೀಡಾಪಟು ಉಮೇಶ್ ಹೆಚ್ ಎನ್ ಹಾಗೂ ಶಾಲಾಭಿವೃದ್ದಿ ಸಮಿತಿ ,ಶಿಕ್ಷಕ ವರ್ಗ ಹಾಗೂ ಸಂಘ ಸಂಸ್ಥೆಗಳು ಅಭಿನಂದಿಸಿದ್ದಾರೆ.




ಬಡ ಯುವ ಪ್ರತಿಭೆಗಳು ಮುಂದಿನ ದಿನಗಳಲ್ಲಿ ಸೂಕ್ತ ತರಬೇತಿ ದೊರೆತು ಉನ್ನತ ಮಟ್ಟದ ಕ್ರೀಡಾಪಟುಗಳಾಗಿ ಹೊರಹೊಮ್ಮಲಿ ಎಂಬುವುದೇ ಪೋಸ್ಟ್ ಮ್ಯಾನ್ ನ್ಯೂಸ್ ಸಂಸ್ಥೆಯ ಆಶಯ…..

Leave a Reply

Your email address will not be published. Required fields are marked *