ಮಂಜುನಾಥ ಗೌಡರೇ ಮೋಸಗಾರಿಕೆ ಇಲ್ಲಿಗೆ ನಿಲ್ಲಿಸಿ : ಕಿಮ್ಮನೆ ರತ್ನಾಕರ್

ತೀರ್ಥಹಳ್ಳಿ,ಸೆ.24- ಆರ್.ಎಂ.ಮಂಜುನಾಥ್ ಗೌಡರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮರುದಿನದಿಂದಲೇ ಗುಂಪುಗಾರಿಕೆ ಪ್ರಾರಂಭ ಮಾಡಿ ಹತ್ತಾರು ವರ್ಷ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಇವರನ್ನು ಪಕ್ಷದಿಂದ ಹೊರಹಾಕುವುದು ಅನಿವಾರ್ಯವಾಗಬಹುದು ಎಂದು ಕಾಂಗ್ರೆಸ್‍ನ ಹಿರಿಯ ಮುಖಂಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಆರ್.ಎಂ.ಮಂಜುನಾಥ್ ಗೌಡರು ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಘಟಕವನ್ನು ಕಡೆಗಣಿಸಿ ಪಕ್ಷದ ಮುಖಂಡರ ಫೋಟೋಗಳನ್ನು ಕರಪತ್ರದಲ್ಲಿ ಪ್ರಕಟಿಸಿ ಖಾಸಗಿಯಾಗಿ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ಕಾರ್ಯಕರ್ತರನ್ನು ಒತ್ತಾಯಿಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಪಕ್ಷಕ್ಕೆ ಸೇರಿ ಇನ್ನು 5 ತಿಂಗಳಾಗಿಲ್ಲ. ಅಷ್ಟರಲ್ಲೇ ಖಾಸಗಿ ಸಭೆಸಮಾರಂಭಗಳನ್ನು ಮಾಡಲಾಗುತ್ತಿದೆ. ಹಣ, ಹೆಂಡ, ರೌಡಿಸಂ ಮೂಲಕ ತೀರ್ಥಹಳ್ಳಿ ಕ್ಷೇತ್ರದಲ್ಲಿ ಜನ ಮನ್ನಣೆ ಪಡೆಯಬಹುದೆಂದು ಯಾವುದಾದರೂ ರಾಜಕಾರಣಿ ಭಾವಿಸಿದರೆ ಅದು ಹುಸಿಯಾಗುತ್ತದೆ ಎಂದು ಹೇಳಿದ್ದಾರೆ.

ಮಂಡಗದ್ದೆ ಹೋಬಳಿ ಕಲ್ಲುಕೊಪ್ಪ ಕರ್‍ಕುಚ್ಚಿಯಿಂದ ತೀರ್ಥಹಳ್ಳಿವರೆಗೆ ನಡೆಸುವ ಪಾದಯಾತ್ರೆ, ಮುಳುಗಡೆ ರೈತರು, ಬಗರ್ ಹುಕ್ಕುಂ ಸಾಗುವಳಿದಾರರ ಜೀವಂತ ಸಮಸ್ಯೆಗಳನ್ನು ಕಾಗೋಡು ಸಾಹೇಬ್ರು ನಾವು ಈಗಾಗಲೇ ಅನೇಕ ಹೋರಾಟಗಳು, ಸಭೆಗಳ ಮೂಲಕ ಪ್ರಯತ್ನಗಳನ್ನು ಮಾಡಿದ್ದೇವೆ. ಅವರುಗಳಿಗೆ ನ್ಯಾಯ ಕೊಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕಾಂಗ್ರೆಸ್ ಪಕ್ಷದಲ್ಲಿದ್ದು, ಕ್ಷೇತ್ರದ ಘಟಕವನ್ನು ದೂರ ಮಾಡಿ ಪಕ್ಷದ ಪ್ರಮುಖರ ಫೋಟೋ ಹಾಕಿ ಪಕ್ಷದ ಚಿಹ್ನೆ ಬಳಸದೆ ನಿಮ್ಮ ಖಾಸಗಿ ಕಾರ್ಯಕ್ರಮದಂತೆ ಮಾಡಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದ್ದಾರೆ.

ಅನೇಕ ಸಮಸ್ಯೆಗಳಿಂದ ಬಳಲುತ್ತಿರುವವರ ಪರವಾಗಿ ಕಳೆದ 35 ವರ್ಷಗಳಿಂದ ತಾವು ಯಾಕೆ ಹೋರಾಟ ಮಾಡಲಿಲ್ಲ. ನೀವು ಸಕ್ರಿಯ ರಾಜಕೀಯದಲ್ಲಿ ಇರಲಿಲ್ಲವೇ? ಜೆ.ಎಚ್.ಪಟೇಲ್, ಬಂಗಾರಪ್ಪ, ಯಡಿಯೂರಪ್ಪ ನಮ್ಮ ರಾಜಕೀಯ ಗುರುಗಳೆಲ್ಲ ಮುಖ್ಯಮಂತ್ರಿಗಳಾಗಿದ್ದರು. ಇತ್ತೀಚೆಗೆ ಒಂದು ವರ್ಷದ ಹಿಂದೆ ನೀವು ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದೀರಿ? ನಿಮ್ಮ ಮುಖಂಡರಾದ ಎಚ್.ಡಿ.ಕುಮಾರಸ್ವಾಮಿ ಕೂ ಮುಖ್ಯಮಂತ್ರಿಗಳಾಗಿದ್ದು, ನಿಮ್ಮ ಮನೆ ಸುತ್ತಮುತ್ತಲಿನ ಸಮಸ್ಯೆಗಳನ್ನ ಅವರ ಗಮನಕ್ಕೆ ಯಾಕೆ ತರಲಿಲ್ಲ.

ಪಕ್ಷದ ಮುಖಂಡರಲ್ಲಿ ಗೊಂದಲ ಸೃಷ್ಟಿಸಿ ಇಕ್ಕಟ್ಟಿನಲ್ಲಿ ಸಿಲುಕಿಸಿ ಇಸಿಸಿ ಬ್ಯಾಂಕ್‍ನಲ್ಲಿ ಮಾಡಿದಂತೆ ಕಾಂಗ್ರೆಸ್‍ನಲ್ಲಿ ಮಾಡದಿರುವುದು ತಮಗೂ ಒಳ್ಳೆಯದು ಹಾಗೂ ಪಕ್ಷಕ್ಕೂ ಒಳ್ಳೆಯದು.
ಮಂಜುನಾಥ್ ಅವರ ಈ ಹೋರಾಟ ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಯಾವುದಾದರೂ ಪಕ್ಷದ ಟಿಕೆಟ್‍ಗಾಗಿ ಎಂದು ಎಲ್ಲರಿಗೂ ತಿಳಿದ ವಿಷಯವೇ. ಕರ್ನಾಟಕ ಸಹಕಾರಿ ಇಲಾಖೆ ನಿಮ್ಮ ಮೇಲೆ ಮಾಡಿರುವ ಆಪಾದನೆಯಿಂದ ಹೊರಬನ್ನಿ. ಸರ್ಕಾರಕ್ಕೆ ಕಟ್ಟಬೇಕಾದ 122 ಕೋಟಿ ಹಣ ಕಟ್ಟಿ, ಆಮೇಲೆ ಯಾವ ಪಕ್ಷದಲ್ಲಿ ಅವಕಾಶ ಸಿಗುತ್ತದೆ ಅಲ್ಲಿಂದ ನಿಮಗೆ ಎಲ್ಲ ಪಕ್ಷದ ಸಿದ್ದಾಂತ , ಎಲ್ಲ ಪಕ್ಷದ ಮುಖಂಡರ ಸ್ನೇಹ, ಯಾವ ಪಕ್ಷಕ್ಕೆ ಹೋದರೂ ಆ ಪಕ್ಷದ ಟಿಕೆಟ್ ಕೇಳುವ ಆರ್ಥಿಕ ಸಾಮಥ್ರ್ಯವಿದೆ.

ಆದರೆ ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಬೇಡಿ. ಈ ಹಿಂದೆ ಕಾಂಗ್ರೆಸ್‍ಗೆ ಬಂದು ಮೋಸ ಮಾಡಿ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‍ಗೆ ಹೋಗಿದ್ದು ಸಾಕು. ಮೋಸಗಾರಿಕೆ ಇಲ್ಲಿಗೆ ನಿಲ್ಲಿಸಿ ಎಂದು ಕಿಮ್ಮನೆ ಹೇಳಿದ್ದಾರೆ.

ಜಿಪಂ, ತಾಪಂ ಚುನಾವಣೆ ಬರುತ್ತದೆ. ತುಂಬ ಅರ್ಹ ಆಕಾಂಕ್ಷಿಗಳಿದ್ದಾರೆ. ಅವರಿಗೆ ಟಿಕೆಟ್ ತಪ್ಪಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಅನೇಕರು ನನ್ನ ಬಳಿ ತಿಳಿಸಿದ್ದಾರೆ. ಈ ರೀತಿಯ ನಡವಳಿಕೆ ಸಲ್ಲದು ಎಂದು ಹೇಳಿದ್ದಾರೆ.

ಅಕ್ಟೋಬರ್ 2ರಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಗ್ರಾಮ ಸ್ವರಾಜ್ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದಾರೆ. ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿ ಟಾಲ್‍ಸ್ಟಾಯ್ ಫಾರಂನಲ್ಲಿ ನಿಯಮಗಳ ವಿರುದ್ಧ ಕಸ್ತೂರಿ ಬಾ ಕಪಾಟ್‍ನಲ್ಲಿ ತಮ್ಮ ತಂದೆತಾಯಿ ನೀಡಿದ 20-30 ರೂ.ಗಳನ್ನು ನಿಯಮದ ವಿರುದ್ಧ ಇಟ್ಟಿದ್ದರು ಎಂದು ತಿಳಿದ ಗಾಂಧಿಯವರು ಸಂಜೆ ಪ್ರಾರ್ಥನಾ ಸಭೆಯಲ್ಲಿ, ನಮ್ಮಿಂದ ತಪ್ಪಾಗಿದೆ. ನಾವು ನಿಯಮಕ್ಕೆ ವಿರುದ್ಧವಾಗಿ ನಡೆದಿದ್ದೇವೆ.ಈ ಕಾರಣಕ್ಕೆ ಶಿಕ್ಷಣ ನೀಡಬೇಕು. ಗಾಂಧೀಜಿ ಶಿಕ್ಷೆಯನ್ನು ಘೋಷಿಸುತ್ತಾರೆ. ತಾನು ಮೂರು ದಿನ ಉಪವಾಸ ಮಾಡುತ್ತೇನೆ ಎಂದು ಹೇಳುತ್ತಾರೆ. 

ನಿಮ್ಮೊಂದಿಗೆ ಕುಳಿತು(ಡಿಸಿಸಿ ಬ್ಯಾಂಕ್ ಹಗರಣ ಕಟ್ಟಿಕೊಂಡು) ಗಾಂಧೀಜಿ ಗ್ರಾಮ ಸ್ವರಾಜ್ ಬಗ್ಗೆ ಗಾಂಧೀಜಿ ಚಿಂತನೆಗಳನ್ನು ಯಾರಿಗೆ ಹೇಳೋದು, ಇದು ನಿಮ್ಮ ಗಮನದಲ್ಲಿ ಇರಲಿ ಎಂದು ಕಿಮ್ಮನೆ ರತ್ನಾಕರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Leave a Reply

Your email address will not be published. Required fields are marked *