ಮದುವೆ ಸಂಭ್ರಮಕ್ಕೆ ತೆರಳಿದ್ದ ಹುಂಚ ಗ್ರಾಮದ ಯುವಕ ಕೋಟೇಶ್ವರದಲ್ಲಿ ಸಾವು | A 29-year-old youth from Kadassur near Ripponpete died in a tragic road accident involving a car in Koteshwara, Udupi district.
ರಿಪ್ಪನ್ ಪೇಟೆ: ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಸಮೀಪದ ಹುಂಚ ಗ್ರಾಮದ ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಹುಂಚ ಸಮೀಪದ ಕಡಸೂರು ನಿವಾಸಿ ಚಂದ್ರಣ್ಣ ಅವರ ಪುತ್ರ ಹರ್ಷ (29) ಮೃತಪಟ್ಟ ದುರ್ದೈವಿ.
ಕುಟುಂಬದ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹರ್ಷ ಕೋಟೇಶ್ವರಕ್ಕೆ ತೆರಳಿದ್ದರು. ಮದುವೆ ಕಾರ್ಯಕ್ರಮ ಮುಗಿದ ಬಳಿಕ ಇತರ ಯುವಕರೊಂದಿಗೆ ಎರಡು ಬೈಕ್ಗಳಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಹರ್ಷ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಶಾಸಕ ಕಿರಣ್ ಕೊಡ್ಲಿ ಭೇಟಿ ನೀಡಿ ಮೃತ ಯುವಕನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಮದುವೆಯ ಸಂಭ್ರಮದಲ್ಲಿ ಭಾಗವಹಿಸಲು ತೆರಳಿದ್ದ ಯುವಕ ರಸ್ತೆ ಅಪಘಾತದಲ್ಲಿ ದುರಂತ ಅಂತ್ಯ ಕಂಡಿರುವುದು ಕುಟುಂಬಸ್ಥರು, ಬಂಧುಗಳು ಹಾಗೂ ಸ್ನೇಹಿತರಲ್ಲಿ ತೀವ್ರ ದುಃಖ ಮೂಡಿಸಿದೆ.
