Headlines

ವಿದ್ಯುತ್ ಅವಘಡಕ್ಕೆ ಬಲಿಯಾದ ಪ್ರತಿಭಾವಂತ ಕ್ರಿಕೆಟಿಗ ಪ್ರವೀಣ್ ಹೆಗಡೆ

ವಿದ್ಯುತ್ ಅವಘಡಕ್ಕೆ ಬಲಿಯಾದ ಪ್ರತಿಭಾವಂತ ಕ್ರಿಕೆಟಿಗ ಪ್ರವೀಣ್ ಹೆಗಡೆ

Talented cricketer Praveen Hegde Boosa (37) died in a tragic electrocution accident at Haregoppa near Keladi in Shivamogga district. The popular batsman’s sudden demise has shocked the local cricket fraternity.

ಶಿವಮೊಗ್ಗ: ಸ್ಥಳೀಯ ಕ್ರಿಕೆಟ್ ವಲಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಪ್ರತಿಭಾವಂತ ಕ್ರಿಕೆಟಿಗ ಪ್ರವೀಣ್ ಹೆಗಡೆ ಬೂಸಾ (37) ವಿದ್ಯುತ್ ಅವಘಡದಲ್ಲಿ ಮೃತಪಟ್ಟಿರುವ ದುರ್ಘಟನೆ ಶಿವಮೊಗ್ಗ ಜಿಲ್ಲೆಯ ಕೆಳದಿ ಸಮೀಪದ ಹಾರೆಗೊಪ್ಪದಲ್ಲಿ ಭಾನುವಾರ ಸಂಜೆ ನಡೆದಿದೆ.

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಿದ್ರಕಾನ್ ಗ್ರಾಮದವರಾದ ಪ್ರವೀಣ್ ಹೆಗಡೆ, ಕಳೆದ ಕೆಲವು ವರ್ಷಗಳಿಂದ ಹಾರೆಗೊಪ್ಪದಲ್ಲಿ ನೆಲೆಸಿದ್ದರು. ಭಾನುವಾರ ಸಂಜೆ ವಿದ್ಯುತ್ ಸಂಪರ್ಕ ಇಲ್ಲದ ಸಮಯದಲ್ಲಿ ಮನೆ ಸಮೀಪದ ವಿದ್ಯುತ್ ತಂತಿಗಳಿಗೆ ಅಡ್ಡಿಯಾಗಿದ್ದ ಮರದ ಕೊಂಬೆಗಳನ್ನು ಕತ್ತರಿಸಲು ಅವರು ಮುಂದಾಗಿದ್ದರು.

ಮರವೇರಿ ಕೊಂಬೆ ಕತ್ತರಿಸುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿದ್ದು, ತೀವ್ರ ವಿದ್ಯುತ್ ಆಘಾತಕ್ಕೊಳಗಾದ ಪ್ರವೀಣ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ಹಾಗೂ ಕುಟುಂಬಸ್ಥರು ತಕ್ಷಣ ನೆರವಿಗೆ ಧಾವಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಪ್ರವೀಣ್ ಹೆಗಡೆ ಸ್ಥಳೀಯ ಕ್ರಿಕೆಟ್ ಟೂರ್ನಿಗಳಲ್ಲಿ ಜನಪ್ರಿಯ ಆಟಗಾರರಾಗಿದ್ದು, ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ, ವೇಗದ ರನ್‌ಗಳಿಕೆ ಹಾಗೂ ದೈತ್ಯ ಸಿಕ್ಸರ್‌ಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಅನೇಕ ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ಅವರು, ಕ್ರೀಡಾಸ್ಫೂರ್ತಿ ಮತ್ತು ಸೌಮ್ಯ ಸ್ವಭಾವದಿಂದ ಸಹ ಆಟಗಾರರ ಹಾಗೂ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.

ಕೇವಲ 37ನೇ ವಯಸ್ಸಿನಲ್ಲಿ ಅವರು ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದು, ಅವರ ನಿಧನಕ್ಕೆ ಕ್ರೀಡಾ ವಲಯ ಮತ್ತು ಸ್ನೇಹಿತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

About The Author