SSLC student dies after slipping into a pond near Ripponpet. MLA Belur Gopalakrishna visits the bereaved family, offers condolences, and assures compensation.
ರಿಪ್ಪನ್ ಪೇಟೆ : ಪಟ್ಟಣದ ಸಮೀಪದ ಬರುವೆ ಗ್ರಾಮದ ಗದ್ದೆಯೊಳಗಿನ ಕೆರೆಯಲ್ಲಿ ಕಾಲುಜಾರಿ ಬಿದ್ದು SSLC ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ದುರ್ಘಟನೆಗೆ ಸಂಬಂಧಿಸಿದಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮೃತ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಮದೀನಾ ಕಾಲೋನಿಯಲ್ಲಿರುವ ಮೃತ ವಿದ್ಯಾರ್ಥಿ ಮಹಮ್ಮದ್ ತಮೀಮ್ ಅವರ ನಿವಾಸಕ್ಕೆ ಭೇಟಿ ನೀಡಿದ ಶಾಸಕರು, ಪೋಷಕರಿಗೆ ಧೈರ್ಯ ತುಂಬಿ ದುಃಖ ಹಂಚಿಕೊಂಡರು. ಈ ದುರ್ಘಟನೆಯಿಂದ ತೀವ್ರವಾಗಿ ಕಂಗೆಟ್ಟಿರುವ ಕುಟುಂಬಕ್ಕೆ ತಮ್ಮ ಸಂತಾಪ ಸೂಚಿಸಿದ ಅವರು, ಸರ್ಕಾರದ ವತಿಯಿಂದ ಸೂಕ್ತ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದರು.
ಘಟನೆಯ ವಿವರಗಳ ಪ್ರಕಾರ, ಶುಕ್ರವಾರ ಪಟ್ಟಣದ ಚೌಡೇಶ್ವರಿ ಬೀದಿಗೆ ಟ್ಯೂಷನ್ಗೆ ತೆರಳಿದ್ದ ತಮೀಮ್, ಬಳಿಕ ಸ್ನೇಹಿತರೊಂದಿಗೆ ಬರುವೆ ಗ್ರಾಮದ ದಿಬ್ಬದತ್ತ ತೆರಳಿದ್ದಾನೆ. ಈ ವೇಳೆ ಗದ್ದೆಯೊಳಗಿನ ಕೆರೆಯ ಮೇಲೆ ನಡೆದು ಹೋಗುವಾಗ ಕಾಲುಜಾರಿ ನೀರಿಗೆ ಬಿದ್ದಿದ್ದು, ಈ ದುರ್ಘಟನೆ ಸಂಭವಿಸಿದೆ.
ಮೃತರ ಮನೆಯ ಭೇಟಿ ಸಂಧರ್ಭದಲ್ಲಿ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ, ಮುಖಂಡರಾದ ಚೇತನ್ ರಾಜ್, ನಿರೂಪ್ ಕುಮಾರ್, ಆಸೀಫ್ ಭಾಷಾ, ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
– ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್