ಶಿವಮೊಗ್ಗದಲ್ಲಿ ಹಿಟ್ ಅಂಡ್ ರನ್: ವಾಕಿಂಗ್‌ಗೆ ತೆರಳಿದ್ದ ಶಿಕ್ಷಕಿ ಸಾವು | A 41-year-old school teacher, Roopa, died after a white Maruti Suzuki car hit her while she was walking near Srirampura Ring Road in Shivamogga on October 11.
ಶಿವಮೊಗ್ಗ: ನಗರದ ಶ್ರೀರಾಮಪುರ ರಿಂಗ್ ರಸ್ತೆ ಬಳಿ ವಾಕಿಂಗ್‌ಗೆ ತೆರಳಿದ್ದ ಶಾಲಾ ಶಿಕ್ಷಕಿಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿದ್ದಾರೆ. ಮೃತರನ್ನು ಶಕ್ತಿಧಾಮ ಲೇಔಟ್ ನಿವಾಸಿ, ಪ್ರೊಫೆಸರ್ ಅವೀಶ್ ಎಸ್.ಟಿ. ಅವರ ಪತ್ನಿ ರೂಪಾ (41) ಎಂದು ಗುರುತಿಸಲಾಗಿದೆ.
ಅಕ್ಟೋಬರ್ 11ರಂದು ಬೆಳಿಗ್ಗೆ ಈ ಅಪಘಾತ ಸಂಭವಿಸಿದ್ದು, ಅಪಘಾತದ ಬಳಿಕ ಕಾರು ನಿಲ್ಲಿಸದೆ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತುಂಗಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಥಮ ಮಾಹಿತಿ ವರದಿಯ (ಎಫ್‌ಐಆರ್) ಪ್ರಕಾರ, ಅಕ್ಟೋಬರ್ 11ರಂದು ಬೆಳಿಗ್ಗೆ ರೂಪಾ ಅವರು ತಮ್ಮ ಮಗ ಪ್ರತೀಕ್ ಜೊತೆ ವಾಕಿಂಗ್‌ಗೆ ತೆರಳಿದ್ದರು. ಬೆಳಿಗ್ಗೆ ಸುಮಾರು 7.15ರ ವೇಳೆಗೆ ಪ್ರತೀಕ್ ತನ್ನ ತಂದೆಗೆ ಕರೆ ಮಾಡಿ, ತಾಯಿಗೆ ರಸ್ತೆ ಅಪಘಾತವಾಗಿದೆ ಎಂದು ಮಾಹಿತಿ ನೀಡಿದ್ದಾನೆ.
ಶಿವಮೊಗ್ಗದಿಂದ ಸಾಗರದ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬಂದ ಬಿಳಿ ಬಣ್ಣದ ಮಾರುತಿ ಸುಜುಕಿ ಕಾರು, ರಸ್ತೆ ಬದಿಯಲ್ಲಿ ವಾಕಿಂಗ್ ಮಾಡುತ್ತಿದ್ದ ರೂಪಾ ಅವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿ ಹೊಡೆದ ಬಳಿಕ ಕಾರು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಅಪಘಾತದಲ್ಲಿ ರೂಪಾ ಅವರ ತಲೆ, ಬೆನ್ನು ಹಾಗೂ ಭುಜದ ಭಾಗಕ್ಕೆ ತೀವ್ರ ಗಾಯಗಳಾಗಿದ್ದವು. ಸ್ಥಳೀಯರ ನೆರವಿನಿಂದ ಅವರನ್ನು ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಂದೇ ಬೆಳಿಗ್ಗೆ ಸುಮಾರು 11.30ಕ್ಕೆ ರೂಪಾ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿತ್ತು.
ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಬಳಿಕ ಪರಾರಿಯಾದ ಕಾರು ಚಾಲಕನ ಪತ್ತೆಗೆ ಪೊಲೀಸರು ಕ್ರಮ ಕೈಗೊಳ್ಳಬೇಕಿದೆ.
