SAGARA | ಆಲಳ್ಳಿ ಹೊಸಕೆರೆಯಲ್ಲಿ ದುರಂತ: ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು | Two boys aged 13 and 11 drowned while swimming in a pond at Alalli village in Sagara taluk, Shivamogga district. Sagara Rural Police have registered a case.
ತಾಳಗುಪ್ಪ: ಸಾಗರ ತಾಲೂಕಿನ ಶಿರೂರು ಆಲಳ್ಳಿ ಗ್ರಾಮದ ಹೊಸಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತ ಬಾಲಕರನ್ನು ಆಲಳ್ಳಿ ಮುಳುಕೇರಿ ನಿವಾಸಿ ಷಣ್ಮುಖ ಅವರ ಪುತ್ರ ಲೇಖನ್ (13) ಹಾಗೂ ಆಲಳ್ಳಿ ಗ್ರಾಮದ ಗಣೇಶ್ ಅವರ ಪುತ್ರ ಪುನೀತ್ (11) ಎಂದು ಗುರುತಿಸಲಾಗಿದೆ.
ಇಬ್ಬರೂ ಬಾಲಕರು ಹೊಸಕೆರೆಯಲ್ಲಿ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಎಳೆಯ ವಯಸ್ಸಿನಲ್ಲೇ ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಸಾಗರ ಉಪವಿಭಾಗೀಯ ಆಸ್ಪತ್ರೆಯ ಬಳಿ ಜಮಾಯಿಸಿದ್ದ ಕುಟುಂಬಸ್ಥರ ದುಃಖದ ದೃಶ್ಯ ಮನಕಲಕುವಂತಿತ್ತು. ಇಬ್ಬರು ಬಾಲಕರ ಅಕಾಲಿಕ ಸಾವು ಆಲಳ್ಳಿ ಗ್ರಾಮದ ಜನರು ಹಾಗೂ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ.
ಘಟನೆಗೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
