ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ರಿಪ್ಪನ್ ಪೇಟೆಯ ಅವನ್ಯಗೆ ಎರಡು ಪದಕ – ರಾಜ್ಯಮಟ್ಟಕ್ಕೆ ಆಯ್ಕೆ | Avanya, a 9th-grade student of Ramakrishna Vidyalaya, Rippon Pete, won first place in triple jump and second place in long jump at the Shivamogga district-level high school sports meet, qualifying for state-level competitions in both events.
ರಿಪ್ಪನ್ ಪೇಟೆ: ಶಿವಮೊಗ್ಗದಲ್ಲಿ ಇಂದು ನಡೆದ ಶಿವಮೊಗ್ಗ ಜಿಲ್ಲಾಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ರಿಪ್ಪನ್ ಪೇಟೆಯ ರಾಮಕೃಷ್ಣ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿ ಅವನ್ಯ ಗಮನಾರ್ಹ ಸಾಧನೆ ಮಾಡಿದ್ದಾಳೆ.
ಕ್ರೀಡಾಕೂಟದಲ್ಲಿ ಅವನ್ಯ ತ್ರಿವಿತಾ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾಳೆ. ಲಾಂಗ್ ಜಂಪ್ನಲ್ಲಿ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕಕ್ಕೆ ಭಾಜನಳಾಗಿದ್ದಾಳೆ. ಈ ಎರಡೂ ಕ್ರೀಡಾ ವಿಭಾಗಗಳಲ್ಲಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಶಾಲೆ ಹಾಗೂ ರಿಪ್ಪನ್ ಪೇಟೆ ಪ್ರದೇಶಕ್ಕೆ ಹೆಮ್ಮೆ ತಂದಿದ್ದಾಳೆ.
ಅವನ್ಯ ಹಾಲಗುಡ್ಡೆ ಗ್ರಾಮದ ರಾಜೇಶ್ ಮತ್ತು ಶಿಲ್ಪ ದಂಪತಿಯ ಪುತ್ರಿ. ಪ್ರಸ್ತುತ ಕುಟುಂಬವು ರಿಪ್ಪನ್ ಪೇಟೆಯ ವಾಸವಾಗಿದ್ದು, ರಾಮಕೃಷ್ಣ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕರಾದ ರವಿ, ಸಂಸ್ಥೆಯ ಸಂಸ್ಥಾಪಕರಾದ ದೇವರಾಜ್ ಸರ್, ಸರಿತಾ ಮೇಡಂ, ಶಾಲೆಯ ಶಿಕ್ಷಕರು ಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಜಿಲ್ಲಾಮಟ್ಟದಲ್ಲಿ ಎರಡು ಪದಕಗಳನ್ನು ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಅವನ್ಯ, ಮುಂದಿನ ಸ್ಪರ್ಧೆಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಯಶಸ್ಸು ಸಾಧಿಸಲಿ ಎಂದು ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಪೋಷಕರು ಶುಭ ಹಾರೈಸಿದ್ದಾರೆ.
