ಶಿವಮೊಗ್ಗ ದಸರಾ 2026ರ ಅಂಗವಾಗಿ ಖಾದ್ಯ ತಯಾರಿಕೆ ಸ್ಪರ್ಧೆ | Shivamogga Dasara 2026 featured a cooking competition where sibling pairs prepared a variety of dishes using peanuts and coconut within 30 minutes as part of Ahara Dasara.
ಶಿವಮೊಗ್ಗ: ಶಿವಮೊಗ್ಗ ದಸರಾ 2026ರ ಅಂಗವಾಗಿ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಆಹಾರ ದಸರಾ ಪ್ರಯುಕ್ತ ಶೇಂಗಾ ಮತ್ತು ಕೊಬ್ಬರಿಯನ್ನು ಬಳಸಿ ವಿವಿಧ ಖಾದ್ಯಗಳನ್ನು ತಯಾರಿಸುವ ಸ್ಪರ್ಧೆ ನಡೆಯಿತು.
ಸ್ಪರ್ಧೆಯಲ್ಲಿ ಶೇಂಗಾ ಮತ್ತು ಕೊಬ್ಬರಿಯನ್ನು ಪ್ರಮುಖ ಪದಾರ್ಥಗಳನ್ನಾಗಿ ಬಳಸಿಕೊಂಡು ಅರ್ಧ ಗಂಟೆಯೊಳಗೆ ಬಗೆಬಗೆಯ ಖಾದ್ಯಗಳನ್ನು ತಯಾರಿಸುವ ಸವಾಲು ನೀಡಲಾಗಿತ್ತು. ಸುಮಾರು 12 ಜೋಡಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ಬಗೆಯ ಖಾದ್ಯಗಳನ್ನು ಸಿದ್ಧಪಡಿಸಿದರು. ಅಣ್ಣ-ತಂಗಿ, ಅಕ್ಕ-ತಮ್ಮ ಹಾಗೂ ಅಕ್ಕ-ತಂಗಿಯರ ಜೋಡಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಜಿಲ್ಲಾ ಆಹಾರ ಸರ್ವೇಕ್ಷಣಾಧಿಕಾರಿ ಡಾ. ನಾಗರಾಜ್ ನಾಯ್ಕ್ ಅವರು ಸ್ಪರ್ಧೆಯನ್ನು ಉದ್ಘಾಟಿಸಿದರು. ಶಾಸಕ ಎಸ್.ಎನ್. ಚನ್ನಬಸಪ್ಪ, ಮಾಜಿ ಕಾರ್ಪೊರೇಟರ್ ಜ್ಞಾನೇಶ್ವರ್ ಹಾಗೂ ಆಹಾರ ದಸರಾ ಕಾರ್ಯದರ್ಶಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಮಾಜಿ ಕಾರ್ಪೊರೇಟರ್ ಅನಿತಾ ರವಿಶಂಕರ್ ಮತ್ತು ಬಿಎಚ್ಇಒ ಸುಶೀಲಾಬಾಯಿ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಸಹೋದರ-ಸಹೋದರಿಯರ ನಡುವಿನ ಬಾಂಧವ್ಯವನ್ನು ಬಲಪಡಿಸುವುದರ ಜೊತೆಗೆ, ಸಾಂಪ್ರದಾಯಿಕ ಆಹಾರ ಪದಾರ್ಥಗಳ ಬಳಕೆ ಮತ್ತು ಪಾಕಕಲೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿತ್ತು.
