ಕಿಂಡಿಯ ಮೂಲಕ ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ | Police in Bhadravathi arrested a 19-year-old suspect within hours of registering a house burglary case and recovered a gold mangalsutra worth approximately ₹6.20 lakh. Search continues for another accused.
ಭದ್ರಾವತಿ: ಮನೆಯ ಸಣ್ಣ ಕಿಂಡಿಯ ಮೂಲಕ ಒಳನುಗ್ಗಿ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಪ್ರಕರಣವನ್ನು ಭದ್ರಾವತಿಯ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯ ಪೊಲೀಸರು ಭೇದಿಸಿದ್ದು, ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ 19 ವರ್ಷದ ಆರೋಪಿ ಪ್ರೇಮ್ ಕುಮಾರ್ನನ್ನು ಬಂಧಿಸಿದ್ದಾರೆ.
ಬಂಧಿತನಿಂದ ಸುಮಾರು 6.20 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಭದ್ರಾವತಿಯ ತಮ್ಮಣ್ಣ ಕಾಲೋನಿಯ 1ನೇ ಕ್ರಾಸ್ನಲ್ಲಿ ಈ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ವಿಜಯ ಎಂಬುವವರು ತಮ್ಮ ಮನೆಯ ಬೀರುವಿನಲ್ಲಿ ಇಟ್ಟಿದ್ದ ಚಿನ್ನಾಭರಣಗಳನ್ನು ಕಳ್ಳರು ಕಳವು ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.
ವಿಜಯ ಅವರು ಮದುವೆ ಸಮಾರಂಭವೊಂದಕ್ಕೆ ತೆರಳಿ ಮನೆಗೆ ಹಿಂದಿರುಗಿದ ಬಳಿಕ, ತಮ್ಮ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ತೆಗೆದು ಬೀರುವಿನಲ್ಲಿ ಇಟ್ಟಿದ್ದರು. ನಂತರ ಎಂದಿನಂತೆ ವ್ಯಾಪಾರಕ್ಕೆ ತೆರಳಿದ್ದರು.
ಅಕ್ಟೋಬರ್ 9ರಂದು ಬೆಂಗಳೂರಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ವೇಳೆ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಪರಿಶೀಲಿಸಿದಾಗ, ಲಾಕರ್ನಲ್ಲಿಟ್ಟಿದ್ದ 44 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಹಾಗೂ ತಲಾ ಒಂದು ಗ್ರಾಂ ತೂಕದ ನಾಲ್ಕು ಚಿನ್ನದ ಉಂಗುರಗಳು ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ನಂತರ ದೂರು ಸಲ್ಲಿಸಿದ್ದಾರೆ.
ತ್ವರಿತ ಕಾರ್ಯಾಚರಣೆ: ಆರೋಪಿ ಬಂಧನ
ಈ ಕುರಿತು ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಕೈಗೊಂಡು, ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿ ಪ್ರೇಮ್ ಕುಮಾರ್ (19) ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನಿಂದ ಸುಮಾರು 6.20 ಲಕ್ಷ ರೂ. ಮೌಲ್ಯದ 44 ಗ್ರಾಂ 300 ಮಿಲಿ ತೂಕದ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಭದ್ರಾವತಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಅವರ ಮಾರ್ಗದರ್ಶನದಲ್ಲಿ, ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯ ಪಿಎಸ್ಐ ಸಿದ್ದಪ್ಪ ಎಂ.ಪಿ. ನೇತೃತ್ವದಲ್ಲಿ ಸಿಬ್ಬಂದಿಗಳಾದ ಆದರ್ಶ ಶೆಟ್ಟಿ, ಆಸ್ಟಿನ್ , ಬಸವರಾಜ ನಾಯ್ಕ, ಹಣಮಂತ ಅಮಾತಿ, ಸುನೀತಾ ಎಂ, ಮೊಹಮದ್ ಫಿರೋಜ್ ಪಾಲ್ಗೊಂಡಿದ್ದರು.
ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಪೊಲೀಸರ ತ್ವರಿತ ಕಾರ್ಯಾಚರಣೆಯನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಾರಿಯಪ್ಪ ಅವರು ಶ್ಲಾಘಿಸಿದ್ದಾರೆ.
