Barrier for road safety near Chippigara Lake – Police install reflectors, prevent accidents
RIPPONPETE | ಚಿಪ್ಪಿಗರ ಕೆರೆ ಬಳಿ ರಸ್ತೆ ಸುರಕ್ಷತೆಗೆ ತಡೆಗೋಡೆ: ಪೊಲೀಸರಿಂದ ರಿಫ್ಲೆಕ್ಟರ್ ಅಳವಡಿಕೆ, ಅಪಘಾತಗಳಿಗೆ ತಡೆ
Barrier for road safety near Chippigara Lake – Police install reflectors, prevent accidents
ರಿಪ್ಪನ್ ಪೇಟೆ : ಪಟ್ಟಣದ ಹೊಸನಗರ ರಸ್ತೆಯಲ್ಲಿರುವ ಚಿಪ್ಪಿಗರ ಕೆರೆ ದಂಡೆಯ ಬಳಿ ಅಪಾಯಕಾರಿ ತಿರುವುಗಳು ಹಾಗೂ ಸೂಕ್ತ ತಡೆಗೋಡೆಗಳ ಕೊರತೆಯಿಂದಾಗಿ ನಿರಂತರವಾಗಿ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದವು. ಇತ್ತೀಚೆಗೆ ಕಾರೊಂದು ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ವೃದ್ಧೆಯೊಬ್ಬರು ಮೃತಪಟ್ಟ ದುರ್ಘಟನೆ ಬಳಿಕ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಸೂಚನೆಯಂತೆ ಚಿಪ್ಪಿಗರ ಕೆರೆ ದಂಡೆಯ ಮೇಲೆ ತಡೆಗೋಡೆ ನಿರ್ಮಿಸಲಾಗಿದ್ದು, ರಸ್ತೆ ಸುರಕ್ಷತೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಚಿಪ್ಪಿಗರ ಕೆರೆ ಏರಿ ಭಾಗದಲ್ಲಿ ತಡೆಗೋಡೆ ಹಾಗೂ ಸೂಚನಾ ಫಲಕಗಳಿಲ್ಲದೇ ಇದ್ದ ಕಾರಣ ರಾತ್ರಿ ವೇಳೆ ವಾಹನ ಸವಾರರಿಗೆ ತಿರುವುಗಳು ಸ್ಪಷ್ಟವಾಗಿ ಕಾಣದೇ ಅಪಘಾತಗಳು ಸಂಭವಿಸುತ್ತಿದ್ದವು. ಈ ಸಮಸ್ಯೆಯನ್ನು ಪೋಸ್ಟ್‌ಮ್ಯಾನ್ ನ್ಯೂಸ್ ತಂಡ ಶಾಸಕರ ಗಮನಕ್ಕೆ ತಂದಿದ್ದು, ವಿಷಯ ತಿಳಿಯುತ್ತಿದ್ದಂತೆ ಅವರು ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿ ತುರ್ತು ಕ್ರಮವಾಗಿ ಬ್ಯಾರಿಕೇಡ್ ನಿರ್ಮಿಸುವಂತೆ ನಿರ್ದೇಶಿಸಿದ್ದರು.
ಇದರಂತೆ ನಿರ್ಮಿಸಲಾದ ತಡೆಗೋಡೆಗೆ ಪಟ್ಟಣದ ಪಿಎಸ್ಐ ರಾಜು ರೆಡ್ಡಿ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ರಿಫ್ಲೆಕ್ಟರ್‌ಗಳನ್ನು ಅಳವಡಿಸಿ, ರಾತ್ರಿ ಹಾಗೂ ಮಂಜಿನ ವೇಳೆಯಲ್ಲೂ ವಾಹನ ಸವಾರರಿಗೆ ಸ್ಪಷ್ಟ ಮಾರ್ಗದರ್ಶನ ದೊರೆಯುವಂತೆ ಮಾಡಿದ್ದಾರೆ. ಜೊತೆಗೆ ಅಪಾಯ ಸೂಚಿಸುವ ನಾಮಫಲಕಗಳನ್ನೂ ಅಳವಡಿಸಲಾಗಿದ್ದು, ಸಂಚಾರ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ರಸ್ತೆ ಸುರಕ್ಷತಾ ಅಭಿಯಾನ ನಡೆಸಲಾಗಿದೆ.
ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರು ಈ ಕ್ರಮವನ್ನು ಸ್ವಾಗತಿಸಿದ್ದು, “ತಡೆಗೋಡೆ ಮತ್ತು ರಿಫ್ಲೆಕ್ಟರ್ ಅಳವಡಿಕೆಯಿಂದ ಅಪಘಾತಗಳ ಸಂಖ್ಯೆ ಕಡಿಮೆಯಾಗಲಿದೆ” ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರವಾಗಿ ಹೆಚ್ಚುವರಿ ಸುರಕ್ಷತಾ ಕ್ರಮಗಳು ಹಾಗೂ ರಸ್ತೆ ಸುಧಾರಣೆ ಕೈಗೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.