RIPPONPETE | ಪಟ್ಟಣದಾದ್ಯಂತ ಸಂಭ್ರಮದ ಯುಗಾದಿ ಆಚರಣೆ
ರಿಪ್ಪನ್ ಪೇಟೆ : ಪಟ್ಟಣ ಸೇರಿದಂತೆ ಎಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿತ್ತು, ಯುಗಾದಿ ಅಮಾವಾಸ್ಯೆ ಅಂಗವಾಗಿ ಸಾರ್ವಜನಿಕರು ಕುಟುಂಬದವರೊಂದಿಗೆ ಸ್ಥಳೀಯ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಹಬ್ಬದ ಪ್ರಯುಕ್ತ ಮನೆಗಳಲ್ಲಿ ವಿಶೇಷ ಸಿಹಿ ಅಡುಗೆಯನ್ನೂ ತಯಾರಿಸಲಾಗುತ್ತಿದೆ.ಹಿಂದೂಗಳ ಧಾರ್ಮಿಕ ನಂಬಿಕೆ ಪ್ರಕಾರ ಯುಗಾದಿಯು ವರ್ಷದ ಮೊದಲ ಹಬ್ಬವಾಗಿದೆ. ಹೀಗಾಗಿ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುವುದು ವಾಡಿಕೆ. ಭಾನುವಾರ ಹಬ್ಬ ಆಚರಿಸಲು ಶನಿವಾರವೇ ವಿವಿಧ ಸಾಮಗ್ರಿಗಳ ಖರೀದಿಯಲ್ಲಿ ಸಾರ್ವಜನಿಕರು ತೊಡಗಿದ್ದರು. ಹಣ್ಣುಗಳು ಹಾಗೂ ತರಕಾರಿಗೂ ಬೇಡಿಕೆ ಹೆಚ್ಚಾಗಿತ್ತು.
ಯುಗಾದಿ ಹಬ್ಬದ ಅಂಗವಾಗಿ ರಿಪ್ಪನ್ ಪೇಟೆ ಪಟ್ಟಣದ ವಿನಾಯಕ ವೃತ್ತದಲ್ಲಿ ಇಂದು ಹಿಂದೂ ಮಹಾಸಭಾ ವತಿಯಿಂದ ಆಯೋಜಿಸಲಾಗಿದ್ದ ಹೊಸವರ್ಷದ ಧ್ವಜಾರೋಹಣ ಕಾರ್ಯಕ್ರಮವನ್ನು ದೇವಸ್ಥನಾದ ವ್ಯವಸ್ಥಾಪನ ಸಮಿತಿ ಸದಸ್ಯ ಗಣೇಶ್ ಕಾಮತ್ ನೆರವೇರಿಸಿದರು
ನಂತರ ಮಾತನಾಡಿದ ಗಣೇಶ್ ಕಾಮತ್ ವಿಶ್ವದ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಭಾರತವು ಸಹ ಮುಂಚೂಣಿಯಲ್ಲಿದ್ದು ಇಲ್ಲಿನ ಜನತೆ ಸ್ವಧರ್ಮದಲ್ಲಿ ನಿಷ್ಠೆ ಪರಧರ್ಮ ದಲ್ಲಿ ಸಹಿಷ್ಣುತಾಭಾವವನ್ನು ಹೊಂದಿದ್ದಾರೆ. ಯುಗಾದಿ ಮತ್ತೆ ಬಂದಿದೆ. ಎಲ್ಲಾ ಕಡೆ ಮರ-ಗಿಡಗಳು ಚಿಗುರು ಕಂಡಿವೆ ಮಾವು-ಬೇವು ಕಂಗೊಳಿಸಿದೆ ಇದರಿಂದ ಜನರಲ್ಲಿ ಈಗ ಹಬ್ಬ ಆಚರಿಸುವ ಹುಮ್ಮಸ್ಸು ಬಂದಿದೆ.ಪ್ರಕೃತಿ ಎಂದು ನಮಗೆ ಕೈಕೊಟ್ಟಿಲ್ಲ ಈಗ ಯುಗಾದಿಯು ಪ್ರಕೃತಿದತ್ತವಾಗಿ ಬಂದಿದೆ.ನಮ್ಮ ಹಿಂದಿನ ದಿನಗಳನ್ನು ಮರೆತು ಮುಂದಿನ ದಿನಗಳಲ್ಲಿ ಹೊಸ ಬದುಕನ್ನು ರೂಪಿಸಿಕೊಳ್ಳಬೇಕಾಗಿದೆ. ನಮ್ಮ ಹಿರಿಯರು ಈ ವಿಷಯದಲ್ಲಿ ಉತ್ತಮ ಮಾರ್ಗವನ್ನು ತೋರಿಸಿ ಕೊಟ್ಟು ಹೋಗಿದ್ದಾರೆ. ನಮ್ಮ ಯುವಜನಾಂಗ ವಿಶ್ವಮಟ್ಟದಲ್ಲಿ ಇಡೀ ಮನುಕುಲಕ್ಕೆ ಒಳಿತನ್ನು ಬಯಸುವ ನಾಯಕರಾಗಿ ರೂಪುಗೊಳ್ಳುವ ಅವಕಾಶ ಲಭಿಸಿದೆ. ಯುಗಾದಿ ನಮ್ಮಲ್ಲಿ ವಿಶಾಲ ಮನೋಭಾವ ಬೆಳೆಸಿ ಮನುಷ್ಯ ಸಹಜ ಸಂಕುಚಿತ ಮನೋಭಾವವನ್ನು ತೊಡೆದುಹಾಕಲು ಸಹಕಾರಿಯಾಗಲಿ , ಯುಗಾದಿ ಹೊಸ ವರ್ಷದ ಶುಭ ಕೃತು ನಾಮ ಸಂವತ್ಸರವು ಸರ್ವರಿಗೂ ಶುಭವನ್ನು ತರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಅಧ್ಯಕ್ಷ ಈಶ್ವರ್ ಶೆಟ್ಟಿ ,ಹಿಂದೂ ಮಹಾ ಸಭಾದ ರಾಮಚಂದ್ರ ಬಳೆಗಾರ್ , ಸುಧೀರ್ ಪಿ , ಎಂ. ಬಿ. ಮಂಜುನಾಥ್, ಸುರೇಶ್ ಸಿಂಗ್ , ಸುಧೀಂದ್ರ ಪೂಜಾರಿ,ವೈ. ಜೆ.ಕೃಷ್ಣ,ಭಾಸ್ಕರ ಶೆಟ್ಟಿ,ರಮೇಶ್ ಫ಼್ಯಾನ್ಸಿ, ಮುರುಳಿ ಕೆರೆಹಳ್ಳಿ, ಆರ್ ರಾಘವೇಂದ್ರ. ವಾಸು ಶೆಟ್ಟಿ. ಕಗ್ಲಿ ಲಿಂಗಪ್ಪ. ಮೈಕ್ ದಾನಪ್ಪ. ಮೆಡಿಕಲ್ ಸತೀಶ್. ನಾಗಭೂಷಣ್ , ಇನ್ನಿತರರಿದ್ದರು.