ಹಾರೋಹಿತ್ತಲು ಗ್ರಾಮದಲ್ಲಿ ಚಿರತೆ ದಾಳಿ: ಸಿಸಿಟಿವಿಯಲ್ಲಿ ಸೆರೆ ಬಿದ್ದ ಚಿರತೆ ಓಡಾಟ, ಗ್ರಾಮಸ್ಥರಲ್ಲಿ ಆತಂಕ


An incident took place on Sunday morning at around 3.45 am when a leopard entered the yard of a person named Vasudeva in Harohittalu village. It is learnt that the leopard attacked the pet dog in the house, but fortunately the dog escaped.
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರೋಹಿತ್ತಲು ಗ್ರಾಮದ ಕೊಳವಂಕ–ಕಂಬತ್ಮನೆ ಪ್ರದೇಶದಲ್ಲಿ ಚಿರತೆ ಓಡಾಟ ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಭೀತಿ ಮೂಡಿದೆ.
ಭಾನುವಾರ ಬೆಳಗ್ಗೆ ಸುಮಾರು 3.45ರ ಸುಮಾರಿಗೆ ಹಾರೋಹಿತ್ತಲು ಗ್ರಾಮದ ವಾಸುದೇವ ಎಂಬುವವರ ಮನೆ ಅಂಗಳಕ್ಕೆ ಚಿರತೆ ನುಗ್ಗಿರುವ ಘಟನೆ ನಡೆದಿದೆ. ಮನೆಯಲ್ಲಿದ್ದ ಸಾಕು ನಾಯಿಯ ಮೇಲೆ ಚಿರತೆ ದಾಳಿ ನಡೆಸಿದ್ದು, ಅದೃಷ್ಟವಶಾತ್ ನಾಯಿ ತಪ್ಪಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಬೆಳಿಗ್ಗೆ ನಾಯಿಯ ಸ್ಥಿತಿಯನ್ನು ಗಮನಿಸಿದ ಮಾಲೀಕರಿಗೆ ಅನುಮಾನ ಮೂಡಿದ್ದು, ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮನೆ ಸುತ್ತ ಚಿರತೆ ಓಡಾಡುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ದಾಖಲಾಗಿವೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಇನ್ನಷ್ಟು ಹೆಚ್ಚಾಗಿದೆ.
ಈ ಘಟನೆಯಿಂದ ಹಾರೋಹಿತ್ತಲು– ಕೊಳವಂಕ– ಕಂಬತ್ಮನೆ ಸುತ್ತಮುತ್ತಲ ಗ್ರಾಮಗಳಲ್ಲಿ ಜನರು ಜೀವ ಭಯದಲ್ಲಿ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಮಾನವ ಜೀವಹಾನಿ ಸಂಭವಿಸಿಲ್ಲ.
ಚಿರತೆ ಸಂಚಾರದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ತಕ್ಷಣ ಎಚ್ಚೆತ್ತು ಚಿರತೆಯನ್ನು ಹಿಡಿದು ಸುರಕ್ಷಿತವಾಗಿ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ರಾತ್ರಿ ವೇಳೆ ಹೊರಗೆ ಸಂಚರಿಸಲು ಹಾಗೂ ಮಕ್ಕಳನ್ನು ಹೊರಗೆ ಬಿಡಲು ಗ್ರಾಮಸ್ಥರು ಭಯಪಡುವಂತಾಗಿದೆ.