Headlines

ನಾಳೆಯಿಂದ ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವ |2026 ಜನವರಿ 5ರವರೆಗೆ ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು

ನಾಳೆಯಿಂದ ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವ |
2026 ಜನವರಿ 5ರವರೆಗೆ ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು

Durga Devi Jatra Mahotsav in Topina from tomorrow |
Various religious-cultural programs till January 5, 2026

ಬಂಕಾಪುರ:ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಮುನವಳ್ಳಿ–ಬಂಕಾಪುರ ಪಟ್ಟಣದ ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವವು ಡಿಸೆಂಬರ್ 30ರಿಂದ 2026ರ ಜನವರಿ 5ರವರೆಗೆ ಭಕ್ತಿಭಾವದಿಂದ ನಡೆಯಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಆಮಂತ್ರಣ ಪತ್ರಿಕೆಗಳನ್ನು ದೇವಸ್ಥಾನ ಆವರಣದಲ್ಲಿ ಮಂಗಳವಾರ ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ದೇವಸ್ಥಾನ ಸೇವಾ ಸಮಿತಿ ಕಾರ್ಯದರ್ಶಿ ಬಸವರಾಜ್ ಕೂಲಿ, ಉತ್ತರ ಕರ್ನಾಟಕದ ಬಹುದೊಡ್ಡ ಜಾತ್ರೆಗಳಲ್ಲೊಂದಾದ ತೋಪಿನ ದುರ್ಗಾದೇವಿ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಲ್ಲದೇ ಹೊರ ರಾಜ್ಯಗಳಿಂದಲೂ ಸಹಸ್ರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದರು. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಜಾತ್ರೆಯನ್ನು ಅಚ್ಚುಕಟ್ಟಾಗಿ ಹಾಗೂ ಶಿಸ್ತಿನಿಂದ ನಡೆಸಲು ಸೇವಾ ಸಮಿತಿ ಸದಸ್ಯರು ಸಂಪೂರ್ಣ ಸನ್ನದ್ಧರಾಗಬೇಕು ಎಂದು ಮನವಿ ಮಾಡಿದರು. ಮಹಾತ್ಮ ಗಾಂಧೀಜಿಯವರ ತತ್ವಸಿದ್ಧಾಂತದಂತೆ ಯಾವುದೇ ಪ್ರಾಣಿ ಹಿಂಸೆಗೆ ಅವಕಾಶ ನೀಡದೆ ಸಾತ್ವಿಕ ರೀತಿಯಲ್ಲಿ ಜಾತ್ರೆಯನ್ನು ಆಚರಿಸಬೇಕು ಎಂದು ಅವರು ಹೇಳಿದರು.
ಸಮಿತಿ ಮುಖಂಡ ಉಮೇಶ್ ಅಂಗಡಿ ಮಾತನಾಡಿ, ಜಾತ್ರೆಯ ವೇಳೆ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ದೂರದೂರಿನಿಂದ ಆಗಮಿಸುವ ಭಕ್ತರು ಹಾಗೂ ಕುಸ್ತಿಪಟುಗಳಿಗೆ ಊಟ-ಉಪಹಾರದ ವ್ಯವಸ್ಥೆಯಲ್ಲಿ ಯಾವುದೇ ಕೊರತೆ ಆಗದಂತೆ ಸೇವಾ ಕಾರ್ಯಕರ್ತರು ನಿಗಾ ವಹಿಸಬೇಕು. ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಜವಾಬ್ದಾರಿಯುತವಾಗಿ ನಡೆಸಬೇಕು ಎಂದು ಸಲಹೆ ನೀಡಿದರು.

ಸಭೆಗೆ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಲಿಂಗನಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹನುಮಂತಪ್ಪ ಹಳವಳ್ಳಿ, ಅರ್ಚಕರಾದ ಸುಮಂತ್ ಪೂಜಾರ್, ಲಕ್ಷ್ಮಣ ಪೂಜಾರ್ ಸೇರಿದಂತೆ ಪ್ರತಾಪ್ ಸಿಂಗ್ ಶಿವಪ್ಪನವರ್, ಸೋಮನಗೌಡ ಪಾಟೀಲ್, ಬಾಪು ಗೌಡ್ರು ಪಾಟೀಲ್, ಗದಿಗಯ್ಯ ಹಿರೇಮಠ, ರಾಮಚಂದ್ರಪ್ಪ ಪುಕಾಳೆ, ಬಸವಣ್ಣಪ್ಪ ತೋಟದ್, ಗುರುಪಾದಪ್ಪ ಕಿವುಡನವರ್, ವೀರಪ್ಪ ನಾಗನೂರು, ಪ್ರಕಾಶ್ ಹಂಡೆ, ಮಲ್ಲಪ್ಪ ಕಡಹಳ್ಳಿ, ಮಾಲತೇಶ್ ಮನವಳ್ಳಿ, ರಾಮನಗೌಡ ಪಾಟೀಲ್, ದೇವೇಂದ್ರಪ್ಪ ಹಳವಳ್ಳಿ, ಶಂಕ್ರಣ್ಣ ಕಟಗಿ, ಶಂಭಣ್ಣ ಕುರುಗೋಡಿ, ಭರತ್ ಚವ್ವಿ, ಬಾಬುರಾವ್ ಹಂಡೆ, ಹರೀಶ್ ಭವಾನಿ ಸೇರಿದಂತೆ ಬಿಸನಹಳ್ಳಿ, ಮುನವಳ್ಳಿ, ಬಂಕಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು ಮತ್ತು ದೇವಸ್ಥಾನ ಸೇವಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ವರದಿ: ನಿಂಗರಾಜ್ ಕೂಡಲ
ಬಂಕಾಪುರ, ಹಾವೇರಿ ಜಿಲ್ಲೆ