Headlines

“ಧರ್ಮ, ಹಬ್ಬ, ಕರ್ತವ್ಯ – ಎಲ್ಲವನ್ನೂ ಒಟ್ಟುಗೂಡಿಸಿದ ತೀರ್ಥಹಳ್ಳಿ ಪೊಲೀಸ್‌ ಗಣಪತಿ ವಿಸರ್ಜನೆ”

“ಧರ್ಮ, ಹಬ್ಬ, ಕರ್ತವ್ಯ – ಎಲ್ಲವನ್ನೂ ಒಟ್ಟುಗೂಡಿಸಿದ ತೀರ್ಥಹಳ್ಳಿ ಪೊಲೀಸ್‌ ಗಣಪತಿ ವಿಸರ್ಜನೆ”

“ಮೆರವಣಿಗೆಯಲ್ಲಿ ಸಿಬ್ಬಂದಿಗಳೊಂದಿಗೆ ಕುಣಿದು ಕುಪ್ಪಳಿಸಿದ ಸಿಪಿಐ ಇಮ್ರಾನ್ ಬೇಗ್  – ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದ ತೀರ್ಥಹಳ್ಳಿ”

ತೀರ್ಥಹಳ್ಳಿ : ಗಣಪತಿ ಹಬ್ಬ ಎಂದರೆ ಸದಾ ಸೌಹಾರ್ದ, ಸಂತೋಷ, ಏಕತೆ ತುಂಬಿದ ಹಬ್ಬ. ಸಾಮಾನ್ಯವಾಗಿ ವಿಸರ್ಜನೆ ವೇಳೆ ಪೊಲೀಸರು ಶಿಸ್ತಿಗಾಗಿ ಬೈಯುತ್ತಾರೆ, ನಿಯಮ ಪಾಲನೆಗೆ ಕಠಿಣವಾಗುತ್ತಾರೆ ಎಂಬ ಮಾತು ಕೇಳಿ ಬರುತ್ತದೆ. ಆದರೆ ತೀರ್ಥಹಳ್ಳಿಯ ಪೊಲೀಸರು ಈ ಬಾರಿ ತಮ್ಮ ಕಾರ್ಯ ಶೈಲಿಯಿಂದ ಜನಮನ ಗೆದ್ದಿದ್ದಾರೆ.

ಮೂರು ವರ್ಷಗಳಿಂದ ಪಟ್ಟಣದ ರಥಬೀದಿಯಲ್ಲಿರುವ ಪೊಲೀಸ್ ಠಾಣೆಯೇ ಗಣಪತಿ ಹಬ್ಬದ ವೇದಿಕೆಯಾಗಿ ಪರಿಣಮಿಸಿದೆ. ಈ ಬಾರಿ ಕೂಡ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ಇಂದು ಭಾವಪೂರ್ಣವಾಗಿ ವಿಸರ್ಜನೆ ಮಾಡಲಾಯಿತು. ಪೊಲೀಸ್ ಸಿಬ್ಬಂದಿಯೇ ಚಂಡೆ, ನಾಸಿಕ್ ಬ್ಯಾಂಡ್ ನಾದಕ್ಕೆ ತಾವು ಕುಣಿದು ಕುಪ್ಪಳಿಸಿ ಹಬ್ಬದ ಸಂಭ್ರಮವನ್ನು ತಮಗೂ ಸೇರಿಸಿಕೊಂಡರು. ಸದಾ ಒತ್ತಡದ ಕರ್ತವ್ಯಗಳಲ್ಲಿ ಮುಳುಗಿರುವ ಪೊಲೀಸರಿಗೆ ಇದು ನಿಜಕ್ಕೂ ಒಂದು ರೀಲೀಫ್ ಕ್ಷಣವಾಗಿತ್ತು.

ಈ ಬಾರಿ 30 ಕ್ಕೂ ಹೆಚ್ಚು ಗಣಪತಿ ವಿಸರ್ಜನೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದರಿಂದ ತಮ್ಮ ಕರ್ತವ್ಯಕ್ಕೆ ಹಾಜರಾಗಬೇಕಾದ ಕಾರಣ, ಠಾಣೆಯ ಗಣಪತಿಯನ್ನು ಮಧ್ಯಾಹ್ನದೊಳಗೆ ವಿಸರ್ಜಿಸಲಾಯಿತು. ಠಾಣೆಯಿಂದ ಆಗುಂಬೆ ಬಸ್ ನಿಲ್ದಾಣದವರೆಗೆ ಮೆರವಣಿಗೆ ಮಾಡಿ, ಬಳಿಕ ತುಂಗಾ ನದಿಯಲ್ಲಿ ವಿಸರ್ಜನೆ ನೆರವೇರಿಸಲಾಯಿತು. ಸರಳತೆ, ಸಂಭ್ರಮ ಮತ್ತು ಏಕತೆಯಿಂದ ಈ ವಿಸರ್ಜನಾ ಮೆರವಣಿಗೆ ವಿಶಿಷ್ಟತೆ ನೀಡಿತು.

ಮಾದರಿಯಾದ ಸಿಪಿಐ ಇಮ್ರಾನ್ ಬೇಗ್

“ದೇವರು ಎಲ್ಲರಿಗೂ ಒಂದೇ” ಎಂಬ ನಂಬಿಕೆಯನ್ನು ತೋರಿಸಿ, ಗಣಪತಿ ಪೂಜೆ ಸಲ್ಲಿಸಿ ನಂತರ ವಿಸರ್ಜನೆಗೆ ವಾಹನ ಚಾಲನೆ ಮಾಡಿದ ಸಿಪಿಐ ಇಮ್ರಾನ್ ಬೇಗ್. ತುಂಗಾ ನದಿಯಲ್ಲಿ ವಿಸರ್ಜನೆ ಮಾಡುವ ವೇಳೆ ಗಣಪತಿಯನ್ನು ತಾವೇ ಕೈಯಲ್ಲಿ ಹೊತ್ತುಕೊಂಡು ಹೋಗಿದ್ದು, ಸಾರ್ವಜನಿಕರಲ್ಲಿ ಅಪಾರ ಮೆಚ್ಚುಗೆಗೆ ಕಾರಣವಾಯಿತು. ಧರ್ಮ ಬೇರೆಯಾದರೂ ನಂಬಿಕೆಯೇ ಒಟ್ಟುಗೂಡಿಸುತ್ತದೆ ಎಂಬ ಸಂದೇಶವನ್ನು ಅವರು ತಮ್ಮ ನಡೆ-ನುಡಿಗಳಿಂದ ತೋರಿಸಿದರು.ತೀರ್ಥಹಳ್ಳಿಯ ಮಣ್ಣಿನ ಗುಣವೇ ಅಂತಹುದು.

ಒಟ್ಟಿನಲ್ಲಿ, ಪೊಲೀಸ್ ಠಾಣೆಯ ಗಣಪತಿ ವಿಸರ್ಜನೆ ಕೇವಲ ಹಬ್ಬವಲ್ಲ, ಅದು ಸೌಹಾರ್ದ, ಏಕತೆ ಮತ್ತು ಭಾವಪೂರ್ಣ ಆಚರಣೆಯ ಮಾದರಿ ಎನಿಸಿತು.