ಬಿಜೆಪಿಯವರಿಂದ  ಹಲಾಲ್‌ಕೋರ್ ಬುದ್ದಿ ಪ್ರದರ್ಶನ : ಶಾಸಕ ಬೇಳೂರು ಗೋಪಾಲಕೃಷ್ಣ

ಬಿಜೆಪಿಯವರಿಂದ  ಹಲಾಲ್‌ಕೋರ್ ಬುದ್ದಿ ಪ್ರದರ್ಶನ : ಶಾಸಕ ಬೇಳೂರು

ಸಾಗರ : ಕೆಜೆಪಿ ಕಟ್ಟಿದಾಗ ಯಡಿಯೂರಪ್ಪ ಅಲ್ಪಸಂಖ್ಯಾತರಿಗೆ ಹೆಚ್ಚು ಅನುದಾನ ಕೊಡುತ್ತೇನೆ ಎಂದು ಘೋಷಣೆ ಮಾಡಿರಲಿಲ್ಲವೇ. ಇದೀಗ ಬಜೆಟ್‌ನ ಶೇ. 1ರಷ್ಟನ್ನು ಅಲ್ಪಸಂಖ್ಯಾತರ ಶ್ರೇಯೋಭಿವೃದ್ದಿಗೆ ಮುಖ್ಯಮಂತ್ರಿಗಳು ಘೋಷಣೆ ಮಾಡಿದರೆ ಬಿಜೆಪಿಯವರು ಹಲಾಲ್ ಬಜೆಟ್ ಎಂದು ಟೀಕಿಸುವ ಮೂಲಕ ತಮ್ಮ ಹಲಾಲ್‌ಕೋರ್ ಬುದ್ದಿ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಬೆಳಂದೂರು-ಚನ್ನಾಪುರ ಗ್ರಾಮದ ಸಂಪರ್ಕ ರಸ್ತೆ ಕಾಮಗಾರಿಗೆ ಶನಿವಾರ ರಾತ್ರಿ ಶಂಕುಸ್ಥಾಪನೆ ನೆರವೇರಿಸಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಕೈನಲ್ಲಿ ಕತ್ತಿ ಹಿಡಿದು ಟಿಪ್ಪು ಸುಲ್ತಾನರ ಟೋಪಿ ಧರಿಸಿ ಮನೆಮನೆಗೆ ಹೋಗಿ ಮುಸ್ಲೀಮರು ನಮ್ಮ ಭಾಯಿಭಾಯಿ ಎಂದವರು ಈಗ ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಿ ಸಣ್ಣ ಪ್ರಮಾಣದ ಘೋಷಣೆ ಮಾಡಿದರೆ ಹಲಾಲ್ ಬಜೆಟ್ ಎಂದು ಟೀಕೆ ಮಾಡುವುದು ಎಷ್ಟು ಸರಿ. ನಮ್ಮ ಬಜೆಟ್ ನಾವು ಕೊಟ್ಟಿದ್ದೇವೆ. ನಿಮ್ಮ ಕೈನಲ್ಲಿ ಕೊಡಲು ಆಗದೆ ಇದ್ದರೆ ಸುಮ್ಮನೆ ಕುಳಿತುಕೊಳ್ಳಿ ಎಂದರು.

ರಾಜ್ಯದಲ್ಲಿ ಶೇ. 23ರಷ್ಟು ಅಲ್ಪಸಂಖ್ಯಾತರಿದ್ದಾರೆ. ಈ ಬಾರಿ 4.9500 ಕೋಟಿ ರೂ. ಬಜೆಟ್ ಮಂಡಿಸಿದ್ದು, ಈ ಪೈಕಿ ಶೇ. 1ರಷ್ಟನ್ನು ಅಲ್ಪಸಂಖ್ಯಾತರ ಏಳಿಗೆಗೆ ಘೋಷಣೆ ಮಾಡಲಾಗಿದೆ. ಶೇ. 99 ಇತರೆ ಸಮುದಾಯದವರಿಗೆ ನೀಡಿರುವುದು ಬಿಜೆಪಿಯವರಿಗೆ ಕಾಣಿಸುತ್ತಿಲ್ಲವೆ ಎಂದು ಪ್ರಶ್ನಿಸಿದ ಬೇಳೂರು, ಕಾಂಗ್ರೇಸ್ ಪಕ್ಷ ಎಲ್ಲ ಜಾತಿಧರ್ಮವನ್ನು ಸಮಾನವಾಗಿ ನೋಡುತ್ತದೆ. ಈ ಬಾರಿ ಅತ್ಯಂತ ಉತ್ತಮವಾದ ಬಜೆಟ್ ಮುಖ್ಯಮಂತ್ರಿಗಳು ಮಂಡಿಸಿದ್ದಾರೆ.

ಶಿಕ್ಷಣ, ವಿದ್ಯಾರ್ಥಿನಿಲಯ, ಆರೋಗ್ಯದ ಕ್ಷೇತ್ರಕ್ಕೆ ಹೆಚ್ಚು ಗಮನ ಹರಿಸಲಾಗಿದೆ. ಎಲೆಚುಕ್ಕಿ ರೋಗ ಸಂಶೋಧನೆಗೆ 64 ಕೋಟಿ ರೂ. ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಮಳೆಮಾಪನಾ ಕೇಂದ್ರಕ್ಕೆ ಒತ್ತು ನೀಡಲಾಗಿದೆ. ಕೃಷಿ ಬಲವರ್ಧನೆಗೆ ಬಜೆಟ್‌ನಲ್ಲಿ ವಿಶೇಷ ಒತ್ತು ನೀಡಲಾಗಿದೆ ಎಂದು ಹೇಳಿದರು.

ಸಾಗರ ಹೊಸನಗರ ವ್ಯಾಪ್ತಿಯಲ್ಲಿ ಸಂಪರ್ಕ ರಸ್ತೆ ಅಭಿವೃದ್ದಿಗೆ ವಿಶೇಷ ಒತ್ತು ನೀಡಲಾಗಿದೆ.
ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಗೂ ಕನಿಷ್ಟ ಎರಡು ಕೋಟಿ ರೂ. ಸಂಪರ್ಕ ರಸ್ತೆಗೆ ನೀಡಲಾಗಿದೆ. ರಸ್ತೆ ಅಗಲೀಕರಣಕ್ಕೆ ಒತ್ತು ನೀಡಿದ್ದು, ಯಡೇಹಳ್ಳಿ ವೃತ್ತದಿಂದ ರಿಪ್ಪನಪೇಟೆ ವೃತ್ತದವರೆಗೆ ರಸ್ತೆ ಅಗಲೀಕರಣಕ್ಕೆ 20 ಕೋಟಿ ರೂ., ರಿಪ್ಪನಪೇಟೆ ವೃತ್ತ ಅಗಲೀಕರಣಕ್ಕೆ 5.50 ಕೋಟಿ ರೂ., ಸಾಗರ ನಗರದ ಎಲ್ಲ ಪ್ರಮುಖ ವೃತ್ತಗಳ ಅಭಿವೃದ್ದಿಗೆ ವಿಶೇಷ ಒತ್ತು ನೀಡಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *