ತಂದೆ-ತಾಯಿಯ ಪಾದಪೂಜೆ ಮಾಡಿದರೆ ಸಾಕು ಪುಣ್ಯ ಪ್ರಾಪ್ತಿಯಾಗುವುದು ; ಮೂಲೆಗದ್ದೆ ಶ್ರೀಗಳು
ರಿಪ್ಪನ್‌ಪೇಟೆ ; ಭಗವಂತನಲ್ಲಿ ಭಕ್ತಿಯಿಂದ ಪ್ರಾರ್ಥಿಸುವುದರೊಂದಿಗೆ ತಾಯಿ-ತಂದೆಯವರು ಸಂಸ್ಕಾರ ಭರಿತರಾದರೆ ಮಕ್ಕಳು ಸಹ ಸಂಸ್ಕಾರ ಭರಿತರಾಗಲು ಸಾಧ್ಯವೆಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ ಹೇಳಿದರು.
ಕಾರಗೋಡು ಗ್ರಾಮದ ಶ್ರೀ ಕಲಾನಾಥೇಶ್ವರ ದೇವಸ್ಥಾನದ ಪ್ರಥಮ ವರ್ಷದ ಪ್ರತಿಷ್ಟಾ ವರ್ಧಂತೋತ್ಸವ ಧಾರ್ಮಿಕ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಇತ್ತೀಚೆಗೆ ಭಾರತ ದೇಶದಲ್ಲಿ ದೊಡ್ಡ ಕ್ರಾಂತಿಯಂತಾದ ಮಹಾನ್ ಕುಂಭ ಮೇಳದಲ್ಲಿ ಭಾಗವಹಿಸಿ ಗಂಗಾ, ಯಮುನಾ, ಸರಸ್ವತಿ ಸ್ನಾನ ಮಾಡುವುದರೊಂದಿಗೆ ಋಷಿ ಮುನಿಗಳ ಶಕ್ತಿಯುತ ಪುರುಷರಾಗಿದ್ದಾರೆ ಅವರ ದರ್ಶನ ಪಡೆದು ಪುಣ್ಯವಂತರಾಗುತ್ತಾರೆಂಬ ನಂಬಿಕೆಯಿದ್ದು ಹಲವರು ಈ ಪುಣ್ಯ ಕಾರ್ಯಕ್ಕೆ ಭಾಗವಹಿಸಲಾಗಿಲ್ಲ ಎಂದು ಬೇಸರ ಪಡುವ ಅಗತ್ಯವಿಲ್ಲ. ತಂದೆ-ತಾಯಿಯರ ಪಾದ ಪೂಜೆ ಮಾಡಿ ಪಾದ ತೊಳೆದ ಪಾದೋದಕವನ್ನು ತಲೆಯ ಮೇಲೆ ಹಾಕಿಕೊಂಡರೆ ಸಾಕು ಹತ್ತು ಪಟ್ಟು ಪುಣ್ಯ ಲಭಿಸುವುದೆಂದು ಹೇಳಿದ ಶ್ರೀಗಳು, ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಶಿಕ್ಷಣವನ್ನು ಕೊಡಿಸಿ ಸುಸಂಸ್ಕೃತ ಸಮಾಜವನ್ನಾಗಿಸುವ ಕಾರ್ಯವನ್ನು ತಂದೆ ತಾಯಂದಿರು ಮಾಡಬೇಕಾಗಿದೆ ಎಂದರು.
ಧಾರ್ಮಿಕ ಕೇಂದ್ರಗಳಿಂದ ಶಾಂತಿ ನೆಮ್ಮದಿ ಪಡೆಯಲು ಸಾಧ್ಯವೆಂದ ಶ್ರೀಗಳು ಜಾತಿ ಭೇದ ಭಾವನೆ ಬೆಳೆಸದೆ ಚಾಡಿಮಾತಿನಿಂದ ಮನೆ ಒಡೆಯುವುದು ಯಾರಿಗೂ ಶೋಭೆ ತರುವುದಿಲ್ಲ. ದೇವಸ್ಥಾನ, ಮಠ-ಮಂದಿರಗಳಿಗೆ ಹೋಗಿ ಭಕ್ತಿಯಿಂದ ಭಗವಂತನ ನೆನೆದರೆ ಸಾಕು ಬದುಕಿನಲ್ಲಿ ಶಾಂತಿ ನೆಮ್ಮದಿಯಿಂದಿರಲು ಸಾಧ್ಯವೆಂದರು.
ಧಾರ್ಮಿಕ ಸಭೆಯಲ್ಲಿ ಕಲಾನಾಥೇಶ್ವರ ಸ್ವಾಮಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ನಾಗಭೂಷಣ, ಕಾರ್ಯದರ್ಶಿ ಮಂಜುನಾಥ, ಚೇತನಕುಮಾರ್ ಹಾಗೂ ಕಲಾನಾಥೇಶ್ವರ ಮಹಿಳಾ ಭಜನಾ ತಂಡದವರು ಹಾಗೂ ಕಾರಗೋಡು, ಬೆಳಕೋಡು, ಕರಡಿಗ ಕಣಬಂದೂರು, ಮೂಗುಡ್ತಿ, ವರನಹೊಂಡ ಸುತ್ತುಮುತ್ತಲಿನ ಭಕ್ತ ಸಮೂಹ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಪುರೋಹಿತ ಬಳಗದವರು ಕಲಾನಾಥೇಶ್ವರ ಸ್ವಾಮಿಗೆ ಕಲಾಹೋಮ ರುದ್ರಾಭಿಷೇಕ ಅಭಿಷೇಕ ಪೂಜೆ ನಂತರ ದೇವರಿಗೆ ವಿಶೇಷ ಅಲಂಕಾರ ಪೂಜೆ ಮಹಾಮಂಗಳಾರತಿ ತೀರ್ಥಪ್ರಸಾದ ನಂತರ ಸಾಮೂಹಿಕ ಅನ್ನಸಂತರ್ಪಣೆ ಜರುಗಿತು.