ಬೈಕ್ ಕದ್ದು ಕಾಡಿನಲ್ಲಿ‌ ಮುಚ್ಚಿಟ್ಟಿದ್ದ ಖತರ್ನಾಕ್ ಕಳ್ಳರ ಹೆಡೆಮುರಿ ಕಟ್ಟಿದ ರಿಪ್ಪನ್‌ಪೇಟೆ ಪೊಲೀಸರು

ಬೈಕ್ ಕದ್ದು ಕಾಡಿನಲ್ಲಿ‌ ಮುಚ್ಚಿಟ್ಟಿದ್ದ ಖತರ್ನಾಕ್ ಕಳ್ಳರ ಹೆಡೆಮುರಿ ಕಟ್ಟಿದ ರಿಪ್ಪನ್‌ಪೇಟೆ ಪೊಲೀಸರು

ರಿಪ್ಪನ್‌ಪೇಟೆ : ಅರಣ್ಯ ಇಲಾಖೆಯ ವಾಚರ್ ಬೈಕ್ ನ್ನು ಕದ್ದು ಗಿರಾಕಿ ಸಿಗುವವರೆಗೂ ಕಾಡಿನೊಳಗೆ ಮುಚ್ಚಿಟ್ಟಿದ್ದ ಖತರ್ ನಾಕ್ ಬೈಕ್ ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಪಿಎಸ್‌ಐ ಪ್ರವೀಣ್ ಎಸ್ ಪಿ ನೇತ್ರತ್ವದ ಸಿಬ್ಬಂದಿಗಳ ತಂಡ ಯಶಸ್ವಿಯಾಗಿದೆ.

ಆರೋಪಿಗಳಾದ ಶಿವಮೊಗ್ಗದ ಅಣ್ಣಾನಗರದ ನಿವಾಸಿಗಳಾದ ಸಾದಿಕ್ ವುಲ್ಲಾ @ ಚಮಟಿ (21) ಮತ್ತು ವಿವೇಕ್ @ ಸಿದ್ದು (23) ಇವರನ್ನು ಬಂಧಿಸಿ ಅಂದಾಜು 25 ಸಾವಿರ ರೂ.ಗಳ ಮೌಲ್ಯದ ಬಜಾಜ್ ಸಿಟಿ 100 ಬೈಕ್ ಅನ್ನು ಅಮಾನತು ಪಡಿಸಿಕೊಳ್ಳಲಾಗಿದೆ.

ನಡೆದಿದ್ದೇನು ..!?

ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅರಸಾಳು ಗ್ರಾಪಂ ನ 9ನೇ ಮೈಲಿಕಲ್ಲು ಬಳಿ ಅರಣ್ಯ ಇಲಾಖೆಯ ದಿನಗೂಲಿ ನೌಕರ  ಸುಧಾಕರ್ ಅ.05ರಂದು ತಮ್ಮ ಬಜಾಜ್ ಸಿಟಿ ಬೈಕ್ ನ್ನು ನಿಲ್ಲಿಸಿ ಕಾರ್ಯನಿಮಿತ್ತ ನೆಡುತೋಪಿನೊಳಗೆ ಹೋಗಿದ್ದಾರೆ.ಸ್ವಲ್ಪ ಸಮಯದ ನಂತರ ಹಿಂದಿರುಗಿ ನೋಡಿದಾಗ ಬೈಕ್ ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ತಿಳಿದು ಬಂದಿದ್ದು ನಂತರ ಅಕ್ಟೋಬರ್08 ರಂದು ರಿಪ್ಪನ್‌ಪೇಟೆ ಠಾಣೆಯಲ್ಲಿ ಬೈಕ್ ಕಳ್ಳತನ ಬಗ್ಗೆ ದೂರು ದಾಖಲಿಸಿದ್ದಾರೆ.

ಆರೋಪಿಗಳ ಪತ್ತೆಗಾಗಿ  ಶಿವಮೊಗ್ಗ ಎಸ್.ಪಿ. ಮಿಥುನ್ ಕುಮಾರ್ ಜಿ ಕೆ, ಎಎಸ್ಐ 1 ಅನಿಲ್ ಕುಮಾರ್ ಭೂಮಾರೆಡ್ಡಿ, ಎಎಸ್ಐ 2 ಕಾರಿಯಪ್ಪ ಎ.ಜಿ ಇವರ ಮಾರ್ಗದರ್ಶದಲ್ಲಿ, ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ, ಹೊಸನಗರ ಸಿಪಿಐ ಗುರಣ್ಣ ಎಸ್ ಹೆಬ್ಬಾಳ್ ಮೇಲ್ವಿಚಾರಣೆಯಲ್ಲಿ ರಿಪ್ಪನ್‌ಪೇಟೆ ಪಿಎಸ್ಐ ಪ್ರವೀಣ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸಿ.ಹೆಚ್.ಸಿ ಚನ್ನಪ್ಪ ಮತ್ತು ಸಿಪಿಸಿ ಸಂತೋಷ್ ಕೊರವರ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು.

ಅಕ್ಟೋಬರ್17 ರಂದು ಪಿಎಸ್‌ಐ ಪ್ರವೀಣ್ ಎಸ್ ಪಿ ಹಾಗೂ ಸಿಬ್ಬಂದಿಗಳ ತಂಡ ಅರಸಾಳು ಭಾಗದಲ್ಲಿ ಗಸ್ತು ತಿರುಗುತಿದ್ದಾಗ ಪೊಲೀಸ್ ಜೀಪ್ ನ್ನು ಕಂಡು ಇಬ್ಬರು ಆರೋಪಿಗಳು ಓಡಲು ಯತ್ನಿಸಿದ್ದಾರೆ.ಅವರನ್ನು ಹಿಡಿದು ವಿಚಾರಿಸಿದಾಗ ಅಕ್ಟೋಬರ್05 ರಂದು ಒಂಬತ್ತನೇ ಮೈಲಿಕಲ್ಲು ಬಳಿಯಲ್ಲಿ ಬೈಕ್ ನ್ನು ಕದ್ದು ಗಿರಾಕಿಗಳು  ಸಿಗುವವರೆಗೂ ಕಾಡಿನಲ್ಲಿ ಮುಚ್ಚಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಅಂದಾಜು 25 ಸಾವಿರ ರೂ.ಗಳ ಮೌಲ್ಯದ ಬಜಾಜ್ ಸಿಟಿ 100 ಬೈಕ್ ಅನ್ನು ಅಮಾನತು ಪಡಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *