w
Headlines
Home » ಮಾಜಿ ಸಚಿವ ಹರತಾಳು ಹಾಲಪ್ಪ ಕುಟುಂಬ ವರ್ಗದವರಿಂದ ಸಂಭ್ರಮದಿಂದ ಭೂಮಿ ಹುಣ್ಣಿಮೆ ಆಚರಣೆ

ಮಾಜಿ ಸಚಿವ ಹರತಾಳು ಹಾಲಪ್ಪ ಕುಟುಂಬ ವರ್ಗದವರಿಂದ ಸಂಭ್ರಮದಿಂದ ಭೂಮಿ ಹುಣ್ಣಿಮೆ ಆಚರಣೆ

GridArt 20241017 163650234.jpg

ಮಾಜಿ ಸಚಿವ ಹರತಾಳು ಹಾಲಪ್ಪ ಕುಟುಂಬ ವರ್ಗದವರಿಂದ ಸಂಭ್ರಮದಿಂದ ಭೂಮಿ ಹುಣ್ಣಿಮೆ ಆಚರಣೆ

ರಿಪ್ಪನ್ ಪೇಟೆ :  ಹರತಾಳು ಗ್ರಾಮದಲ್ಲಿ ಮಾಜಿ ಸಚಿವ ಹಾಗೂ ಕರ್ನಾಟಕ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪರವರು ತಮ್ಮ ಕುಟುಂಬ ವರ್ಗದವರು, ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳೊಂದಿಗೆ ಭೂಮಿ ಹುಣ್ಣಿಮೆಯ ಹಬ್ಬವನ್ನು ತಮ್ಮ ಹೊಲದಲ್ಲಿ ಸಡಗರ ಸಂಭ್ರಮದಿಂದ ಆಚರಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಭೂ ತಾಯಿಯ ಬಯಕೆಗಳನ್ನು ಈಡೇರಿಸುವ ಸೀಮಂತದ ಸಂಭ್ರಮ, ಭೂಮಿಯಲ್ಲಿ ಉತ್ತಿ ಬಿತ್ತಿದ ಬೆಳೆಗಳು ಕಾಳು ಕಟ್ಟುವ ಸಮಯ ಇದಾಗಿದ್ದು, ಭೂ ತಾಯಿ ಗರ್ಭಿಣಿಯೆಂಬ ನಂಬಿಕೆಯಿಂದ ಅವಳ ಬಯಕೆಗೆ ಅನುಗುಣವಾಗಿ ಉಡಿ ತುಂಬುತ್ತಾರೆ. ಭೂಮಿ ಹುಣ್ಣಿಮೆ ಮಲೆನಾಡಿನ ರೈತರ ಪಾಲಿಗೆ ಸಂಭ್ರಮದ ಹಬ್ಬ. ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲಿ ಭೂಮಿ ಹುಣ್ಣಿಮೆ ಹಬ್ಬ ಹೆಚ್ಚು ಪ್ರಚಲಿತದಲ್ಲಿದೆ.ಅದರಲ್ಲೂ ಶಿವಮೊಗ್ಗ ಜಿಲ್ಲೆಯಲ್ಲಿ ಈಡಿಗ (ದೀವರು) ಸಮುದಾಯದಲ್ಲಿ ಈ ಸಂಪ್ರದಾಯ ವಿಶಿಷ್ಟವಾಗ ಬೇರೆ ಕಡೆಗಳಲ್ಲಿ ವಿಭಿನ್ನ ಹೆಸರುಗಳಿಂದ ಹಬ್ಬ ಆಚರಿಸಲ್ಪಡುತ್ತದೆ. ವರ್ಷವಿಡಿ ಭೂಮಿಯಲ್ಲಿ ಉತ್ತಿ ಬಿತ್ತಿ ಬೆಳೆದು ಅನ್ನದಾತ ಎನಿಸಿಕೊಂಡಿರುವ ರೈತನಿಗೆ ಭೂಮಿ ಬರೀ ಮಣ್ಣಲ್ಲ, ಭೂಮಿ ಫಲವತ್ತತೆಯ ಸಂಕೇತ.

ಭೂಮಿ ಹುಣ್ಣಿಮೆ ಸಂದರ್ಭದಲ್ಲಿ ಹೊಲ ಗದ್ದೆಗಳಲ್ಲಿ ಬಿತ್ತಿದ ಬೆಳೆಗಳು ತೆನೆಗಳಾಗಿ, ಕಾಳು ಗಟ್ಟಿಯಾಗುವ ಹಂತದಲ್ಲಿರುತ್ತದೆ, ಅಷ್ಟೇ ಅಲ್ಲದೆ ಅಡಿಕೆ, ತೆಂಗು, ಬಾಳೆ ಸೇರಿದಂತೆ ವಿವಿಧ ಬೆಳೆಗಳ ಫಸಲು ಚೆನ್ನಾಗಿ ಬಂದಿರುತ್ತದೆ. ಈ ಸಂದರ್ಭದಲ್ಲಿ ಭೂ ತಾಯಿ ಗರ್ಭಿಣಿ ಎಂಬ ನಂಬಿಕೆಯಲ್ಲಿ ರೈತಾಪಿ ವರ್ಗ ಪುರಾತನ ಕಾಲದಿಂದಲೂ ಭೂಮಿ ಹುಣ್ಣಿಮೆ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ ಭೂಮಿ ತಾಯಿಗೆ ಅಂತಲೇ ಬಗೆ ಬಗೆಯ ಅಡುಗೆಗಳನ್ನು ಮಾಡುತ್ತಾರೆ. ಅವುಗಳನ್ನು ಚಿತ್ತಾರದಿಂದ ಕೂಡಿದ ಬೆತ್ತ ಅಥವಾ ಬಿದಿರಿನ ಬುಟ್ಟಿಯಲ್ಲಿ ಮನೆಯಿಂದ ತುಂಬಿಕೊಂಡು ಪೂಜೆ ಮಾಡುವ ಸ್ಥಳಕ್ಕೆ ಮನೆಯ ಯಜಮಾನ ತಲೆಯ ಮೇಲೆ ಹೊತ್ತು ಕೊಂಡೊಯ್ಯುವುದು ಸಂಪ್ರದಾಯ.

ಕೆಲವರು ಭತ್ತದ ಗದ್ದೆಯಲ್ಲಿ ಭತ್ತದ ಗಿಡಗಳಿಗೆ ಪೂಜೆ ಮಾಡಿದರೆ, ಅಡಿಕೆ ತೋಟ ಇರುವವರು ಅಡಿಕೆ ಮರಕ್ಕೆ ಸೀರೆಯನ್ನು ಉಡಿಸಿ, ಆಭರಣಗಳನ್ನು ಧರಿಸಿ ಶೃಂಗಾರ ಮಾಡಿರುತ್ತಾರೆ. ಕುಟುಂಬಸ್ಥರಲ್ಲೇ ಸೇರಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಬಳಿಕ ದೇವರುಗಳಿಗೆ ಹಾಗೂ ಭೂಮಿ ತಾಯಿಗೆ ಬಗೆ ಬಗೆಯ ಅಡುಗೆಗಳನ್ನು ನೈವೇದ್ಯ ಮಾಡಿ ಒಂದು ಎಡೆಯನ್ನು ಗದ್ದೆಯಲ್ಲಿ ಇಟ್ಟು, ಭೂಮಿ ತಾಯಿಯ ಬಳಿ ಉತ್ತಮ ಫಸಲನ್ನು ನೀಡಿ ನಮ್ಮ ಕುಟುಂಬಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಬೇಡಿಕೊಳ್ಳುತ್ತಾರೆ ಎಂದರು.

ಆಧುನಿಕತೆಯಿಂದಾಗಿ ನಮ್ಮ ಅನೇಕ ಸಾಂಪ್ರದಾಯಿಕ ಆಚರಣೆಗಳು ಮೂಲೆಗೆ ಸರಿಯುತ್ತಿದ್ದರೂ ಭೂಮಿ ಹುಣ್ಣಿಮೆ ಹಬ್ಬದ ಆಚರಣೆಗಳು ಇಂದಿಗೂ ಚಾಲ್ತಿಯಲ್ಲಿವೆ. ಈ ಹಬ್ಬದ ಆಚರಣೆಗಳು ನಿಸರ್ಗಕ್ಕೆ ಹತ್ತಿರವಾದದ್ದು ಮತ್ತು ನಿಸರ್ಗದಲ್ಲೆ ದೇವರನ್ನು ಕಾಣುವುದು ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ ಎಂದರು.

ಮುಖಂಡರಾದ ಕೆರೆಹಳ್ಳಿ ಸುಂದರೇಶ್, ಹರತಾಳು ರಾಮಚಂದ್ರ, ಯೋಗೇಂದ್ರಪ್ಪ ಗೌಡ ,ಜಿ ಡಿ ಮಲ್ಲಿಕಾರ್ಜುನ್ , ಅಭಿಲಾಷ್ ಚಿಕ್ಕಮಣತಿ , ಸುರೇಶ್ ಹರತಾಳು ,  ಪತ್ರಕರ್ತರಾದ ರಿ. ರಾ.ರವಿಶಂಕರ್,  ಬಸವರಾಜ್ , ಸಬಾಸ್ಟಿಯನ್ , ರಫ಼ಿ ರಿಪ್ಪನ್‌ಪೇಟೆ , ಶಶಿಕುಮಾರ್ ,ನಿವೃತ್ತ ಶಿಕ್ಷಕ ಗಣಪತಿ , ಹರತಾಳು ಗೋಪಾಲಕೃಷ್ಣ , ಜಯಂತ್ ಹರತಾಳು , ಜೋಸ್ ಮ್ಯಾಥ್ಯೂ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.