ಪ್ರಜಾಪ್ರಭುತ್ವ ದಿನಾಚರಣೆ – ಬೃಹತ್ ಮಾನವ ಸರಪಳಿ ರಚನೆ ಯಶಸ್ವಿ

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಇಂದು ಬೆಳಿಗ್ಗೆ 9ರಿಂದ 10 ಗಂಟೆಯವರೆಗೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಬಾರಂದೂರಿನಿಂದ ಶಿವಮೊಗ್ಗ ತಾಲ್ಲೂಕಿನ ಗಡಿ ಗ್ರಾಮ ಮಡಿಕೆಚಿಲೂರುವರೆಗೆ ಮಾನವ ಸರಪಳಿ ರಚನೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಈ ಬೃಹತ್ ಮಾನವ ಸರಪಳಿ ನಿರ್ಮಾಣದಲ್ಲಿ ಜಿಲ್ಲೆಯ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸ್ವಸಹಾಯ ಗುಂಪುಗಳ ಮಹಿಳಾ ಸದಸ್ಯರು, ನೌಕರರು ಹಾಗೂ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿದರು.ಜಿಲ್ಲಾಧಿಕಾರಿ ಗಳ ಕಚೇರಿ ಅವರಣದಲ್ಲಿ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂವಿಧಾನ ಪೀಠಿಕೆಯನ್ನು ವಾಚಿಸಿದರು

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್ ನಿಂದ ಚಾಮರಾಜನಗರದವರೆಗೆ ಒಟ್ಟು 2500 ಕಿ.ಮೀ ಗಳ ಹಾಗೂ ಜಿಲ್ಲೆಯಲ್ಲಿ 60ಕಿ. ಮೀ. ಮಾನವ ಸರಪಳಿ ರಚನೆ ಮಾಡುತ್ತಿರುವುದು ಐತಿಹಾಸಿಕ ದಾಖಲೆಯಯಾಗಿದೆ.ಈ ಘಟನೆ ಇತಿಹಾಸದ ಪುಟಗಳಲ್ಲಿ ಸೇರಲಿದೆ ಎಂದರು. ಸಮಬಾಳು, ಸಮಾನತೆ,ಭ್ರಾತೃತ್ವದ ಸಂಕೇತವಾಗಿರುವ ಈ ಕಾರ್ಯಕ್ರಮಭಾರತದ ಪ್ರಜೆಯಾಗಿರುವ ಎಲ್ಲರಿಗೂ ಹೆಮ್ಮೆ ಎನಿಸಲಿದೆ.

ಮತ ಜಾತಿ, ಭಾಷೆಗಳ ಭೇದವಿಲ್ಲದೆ, ಜಾತ್ಯತೀತವಾಗಿ ಎಲ್ಲರೂ ಕೈ ಕೈ ಹಿಡಿದು ಮಾನವ ಸರಪಳಿ ರಚನೆ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಅತ್ಯಂತ ಹರ್ಷದ ಸಂಗತಿ ಎಂದರು.ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಸಂವಿಧಾನ ಹೊಂದಿರುವ ದೇಶ ನಮ್ಮದು ಸಂವಿಧಾನದ ಮೌಲ್ಯ ಗಳನ್ನು ಎತ್ತಿಹಿಡಿದು ಸಾಕಾರಗೊಳಿಸಬೇಕಾದುದು ಹಾಗೂ ಸಂವಿಧಾನ ದತ್ತವಾಗಿರುವ ಹಕ್ಕುಗಳನ್ನು ಬಳಸಿಕೊಳ್ಳುವಂತೆ ಯೇ ಕರ್ತವ್ಯಗಳನ್ನು ಮರೆಯಬಾರದು ಎಂದರು.

ರಸಋಷಿ ಕುವೆಂಪು ಅವರು ನಾಡಿಗೆ ನೀಡಿದ ಸಂದೇಶದಂತೆ ಈ ದೇಶದಲ್ಲೂ ವಾಸಿಸುವ ಎಲ್ಲರಿಗೂ ಈ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿರಲಿ ಎಂದು ಆಶಿಸುತ್ತೇನೆ ಎಂದ ಅವರು ಭಾಗವಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದ ಅಂಗವಾಗಿ ಮಾರ್ಗ ಮಧ್ಯದ ಸುಮಾರು 20ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಸಭಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹಲವಾರು ಕಲಾತಂಡಗಳು ಹಾಗೂ ವಿವಿಧತೆಯಲ್ಲಿ ಏಕತೆಯನ್ನು ಸಾರುವ ವೇಷ ಭೂಷಣಗಳೊಂದಿಗೆ ಸಾರ್ವಜನಿಕರು ಭಾಗವಹಿಸಿದ್ದರು. ನೆರೆದಿದ್ದವರು ಘೋಷಣೆ ಕೂಗಿ ಸಂಭ್ರಮಿಸಿದರು. ನಂತರ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗಿಯಾದರು.

ಜಿಲ್ಲಾಧಿಕಾರಿಗಳ ಕಚೇರಿ ಆಭರಣದಲ್ಲಿ ನಡೆದಾದ ಈ ಕಾರ್ಯಕ್ರಮದಲ್ಲಿ ಶಾಸಕ ಎಸ್ ಎನ್ ಚನ್ನಬಸಪ್ಪ ವಿಧಾನಪರಿಷತ್ ಸದಸ್ಯ ಶ್ರೀಮತಿ ಬಲ್ಕಿಶ್ ಬಾನು, ಜಿಲ್ಲಾಧಿಕಾರಿ ಗುರುದತ್ ಹೆಗಡೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿಕೆ ಮಿಥುನ್ ಕುಮಾರ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್ ಹೇಮಂತ್ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *