ಜನಿವಾರ ಪ್ರಕರಣ – ತಪ್ಪಿತಸ್ತರ ವಿರುದ್ದ ಸೂಕ್ತ ಕ್ರಮಕ್ಕೆ ಶಾಸಕ ಬೇಳೂರು ಆಗ್ರಹ

ಜನಿವಾರ ತೆಗೆಸಿದ ಪ್ರಕರಣ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ತರು ಯಾರೇ ಆಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಧರ್ಮದ ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟು ಮಾಡುವ ಕೆಲಸ ಯಾರೂ ಮಾಡಬಾರದು.ಸಿಇಟಿ ಪರೀಕ್ಷೆ ತಪಾಸಣೆ ನೆಪದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವ ಪ್ರಕರಣವನ್ನು ನಾನು ಅತ್ಯುಗ್ರವಾಗಿ ಖಂಡಿಸುತ್ತೇನೆ ಎಂದರು.
ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳದೆ ಹೋದಲ್ಲಿ ನಾನು ಆಡಳಿತ ಪಕ್ಷದ ಸದಸ್ಯನಾದರೂ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ. ಈಗಾಗಲೆ ಮುಖ್ಯಮಂತ್ರಿಗಳು ಘಟನೆಯನ್ನು ಖಂಡಿಸಿದ್ದಾರೆ. ಸರ್ಕಾರದಿಂದ ಜನಿವಾರ ತೆಗೆಸಿ ಪರೀಕ್ಷಾ ಕೊಠಡಿಗೆ ಕಳಿಸಿ ಎನ್ನುವ ಯಾವ ಸೂಚನೆಯೂ ಇರಲಿಲ್ಲ. ಆದರೂ ಕೆಲವು ಕಡೆ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಇಂತಹ ಅಧಿಕಾರಿಗಳನ್ನು ಕಡಿವಾಣ ಹಾಕದೆ ಹೋದಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದರು.
ಜಾತಿಗಣತಿ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಪರಿಸ್ಥಿತಿಯನ್ನು ಗಂಭೀರವಾಗಿ ಗಮನಿಸಬೇಕು. ಈಗಾಗಲೇ ಒಕ್ಕಲಿಗ ಮತ್ತು ವೀರಶೈವ ಸಮಾಜ ಜಾತಿಗಣತಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಜಾತಿ ಗಣತಿಯಿಂದ ಯಾವ ಸಮುದಾಯಕ್ಕೂ ಅನ್ಯಾಯವಾಗಬಾರದು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ವರದಿ ಜಾರಿಗೆ ಮೊದಲು ಎಲ್ಲಾ ಸಚಿವರು, ಶಾಸಕರನ್ನು ಕರೆದು ಚರ್ಚೆ ನಡೆಸಬೇಕು. ಯಾವುದೇ ಕಾರಣಕ್ಕೂ ಜಾತಿಗಳ ನಡುವೆ ಸಾಮರಸ್ಯ ಕಂದಕ ಸೃಷ್ಟಿಸುವ ಕೆಲಸವಾಗಬಾರದು ಎಂದು ಹೇಳಿದರು.
ಗೋಷ್ಠಿಯಲ್ಲಿ ಕಲಸೆ ಚಂದ್ರಪ್ಪ, ಸುರೇಶಬಾಬು, ಚೇತನರಾಜ್ ಕಣ್ಣೂರು, ಮಧುಮಾಲತಿ, ಗಣಪತಿ ಮಂಡಗಳಲೆ, ಲಲಿತಮ್ಮ, ಸೈಯದ್ ಜಾಕೀರ್, ಉಮೇಶ್, ಕೆ.ಸಿದ್ದಪ್ಪ, ನಾರಾಯಣಪ್ಪ, ಜಯರಾಮ್ ಇನ್ನಿತರರು ಹಾಜರಿದ್ದರು.