Rippanpet: Tribute to Pulwama martyrs – Memorial program by Hindu Jagran Vedike
ರಿಪ್ಪನ್‌ಪೇಟೆ: ಪುಲ್ವಾಮಾ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ – ಹಿಂದೂ ಜಾಗರಣ ವೇದಿಕೆಯಿಂದ ಸ್ಮರಣಾ ಕಾರ್ಯಕ್ರಮ
POSTMAN NEWS KANNADA
ರಿಪ್ಪನ್‌ಪೇಟೆ: 2019ರ ಫೆಬ್ರವರಿ 14ರಂದು ಜಮ್ಮು–ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ದುರ್ಘಟನೆ ಇಡೀ ದೇಶವನ್ನು ದುಃಖದಲ್ಲಿ ಮುಳುಗಿಸಿತ್ತು. ದೇಶದ ಭದ್ರತೆಗೆ ತಮ್ಮ ಅಮೂಲ್ಯ ಪ್ರಾಣಗಳನ್ನು ಅರ್ಪಿಸಿದ ಆ ವೀರ ಯೋಧರ ತ್ಯಾಗ ಸದಾ ನಮ್ಮ ಹೃದಯಗಳಲ್ಲಿ ಅಮರವಾಗಿರುತ್ತದೆ ಎಂದು ಹಿಂದೂ ಜಾಗರಣ ವೇದಿಕೆಯ ಮಂಜುನಾಥ ಆಚಾರ್ ಹೇಳಿದರು.
ಪಟ್ಟಣದ ವಿನಾಯಕವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆ ವಿನಾಯಕಪೇಟೆ ಘಟಕದ ವತಿಯಿಂದ ಹುತಾತ್ಮ ಯೋಧರ ಸ್ಮರಣಾರ್ಥ ಪುಷ್ಪಾರ್ಚನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಯೋಧರ ತ್ಯಾಗವನ್ನು ಸ್ಮರಿಸಿ ಮೌನಾಚರಣೆ ನಡೆಸಲಾಯಿತು.
ಸೈನಿಕರು ಕರ್ತವ್ಯನಿಷ್ಠೆ, ದೇಶಭಕ್ತಿ ಮತ್ತು ಧೈರ್ಯದ ಪ್ರತೀಕವಾಗಿದ್ದು, “ರಾಷ್ಟ್ರ ಮೊದಲು” ಎಂಬ ಸಂದೇಶವನ್ನು ತಮ್ಮ ಬಲಿದಾನದ ಮೂಲಕ ಜಗತ್ತಿಗೆ ಸಾರಿದ್ದಾರೆ. ಯೋಧರ ಕುಟುಂಬಗಳು ಅನುಭವಿಸಿದ ನೋವು ಅಪಾರವಾದರೂ, ಅವರ ತ್ಯಾಗವು ಕೋಟ್ಯಾಂತರ ಭಾರತೀಯರ ಹೃದಯಗಳಲ್ಲಿ ದೇಶಪ್ರೇಮವನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ನಾಗರತ್ನ ದೇವರಾಜ್ ಅಭಿಪ್ರಾಯಪಟ್ಟರು.
ಪುಲ್ವಾಮಾ ದಾಳಿಯ ಹುತಾತ್ಮರ ಸ್ಮರಣೆ ಕೇವಲ ಒಂದು ದಿನದ ಆಚರಣೆಯಲ್ಲ; ಅದು ದೇಶದ ಸುರಕ್ಷತೆಗೆ ನಾವೆಲ್ಲರೂ ಸದಾ ಜಾಗೃತರಾಗಿರಬೇಕೆಂಬ ಸಂಕಲ್ಪದ ದಿನವಾಗಿದೆ. ಆ ವೀರರಿಗೆ ನಮ್ಮ ನಮನಗಳು. ಅವರ ಆತ್ಮಗಳಿಗೆ ಶಾಂತಿ ಸಿಗಲಿ, ಅವರ ತ್ಯಾಗವು ದೇಶಕ್ಕೆ ದಾರಿ ದೀಪವಾಗಿರಲಿ ಎಂದು ನಿವೃತ್ತ ಸೈನಿಕ ರಾಘವೇಂದ್ರ ಆಚಾರ್ಯ ಹೇಳಿದರು.
ಈ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆಯ ಕುಷನ್ ದೇವರಾಜ್, ಸಂಜಯ್, ಶ್ರೀನಿವಾಸ್ ಆಚಾರ್, ರಾಘವೇಂದ್ರ, ಆಟೋ ಪ್ರಕಾಶ್, ಮೂಗುಡ್ತಿ ಅರುಣ್, ಅಭಿಷೇಕ್, ಆರ್. ರಾಘವೇಂದ್ರ, ತ.ಮ. ನರಸಿಂಹ, ಹೊನ್ನಾಳಿ ರವಿ, ಆಟೋ ಸಂತೋಷ್ ಸೇರಿದಂತೆ ಮಹಿಳಾ ಮುಖಂಡರಾದ ಪದ್ಮ ಸುರೇಶ, ಶೈಲಾ ಪ್ರಭು, ಲಕ್ಷ್ಮಿ ಶ್ರೀನಿವಾಸ್ ಹಾಗೂ ಅನೇಕರು ಭಾಗವಹಿಸಿದ್ದರು.