ಮಹಾಕುಂಭ ಮೇಳದಲ್ಲಿ ಭಾಗಿಯಾದ ಮಾಜಿ ಸಚಿವ ಕುಮಾರ್ ಬಂಗಾರಪ್ಪ
ಶಿವಮೊಗ್ಗ , ಫೆ. 6: ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಫೆ. 6 ರಂದು ಭಾಗಿಯಾಗಿದ್ದಾರೆ.
ಗಂಗಾ, ಯುಮುನಾ, ಸರಸ್ವತಿ ಸಂಗಮ ಸ್ಥಳವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಪೋಟೋ, ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಕುರಿತಂತೆ ಕುಮಾರ್ ಬಂಗಾರಪ್ಪ ಅವರು ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಪ್ರಯಾಗ್ ರಾಜ್ ಮಹಾಕುಂಭ ಮೇಳವು, ನಮ್ಮ ಸಂಸ್ಕೃತಿಯ ಮಹಾನ್ ಪಾವನ ಪರಂಪರೆಯ ಭಾಗವಾಗಿದೆ. ಪವಿತ್ರ ತ್ರಿವೇಣಿ ಸಂಗಮದಲ್ಲಿ ಪಾಪ ವಿಮೋಚನೆಗಾಗಿ ಮತ್ತು ಧಾರ್ಮಿಕ ಶುದ್ಧೀಕರಣಕ್ಕಾಗಿ ಕೋಟ್ಯಾಂತರ ಭಕ್ತರು ಜಮಾಯಿಸುವ ಅತೀ ವಿಶೇಷ ಕ್ಷಣವಾಗಿದೆ.
ಇಂತಹ ಪವಿತ್ರ ಕುಂಭಮೇಳದಲ್ಲಿ ಭಾಗವಹಿಸುತ್ತಿರುವುದು ನನಗೆ ಅತ್ಯಂತ ಗೌರವದ ಸಂಗತಿ. ಇದು ಸಮಾಜದಲ್ಲಿ ಸೌಹಾರ್ದತೆ, ಶಾಂತಿ ಮತ್ತು ಸಜ್ಜನತೆ ಹರಡುವ ಅದ್ಭುತ ಅವಕಾಶವಾಗಿದೆ’ ಎಂದು ತಿಳಿಸಿದ್ದಾರೆ.
‘ನಾವು ನಮ್ಮ ಸಂಸ್ಕೃತಿಯ ಬೆಳಕನ್ನು ಮುಂದಿನ ಪೀಳಿಗೆಯವರಿಗೆ ತಲುಪಿಸುವ ಜವಾಬ್ದಾರಿ ಹೊಂದಿದ್ದೆವೆ. ಹೀಗಾಗಿ ಇಂತಹ ಧಾರ್ಮಿಕ ಉತ್ಸವಗಳಲ್ಲಿ ಶ್ರದ್ಧೆಯಿಂದ ಭಾಗವಹಿಸಿ ಸನಾತನ ಧರ್ಮದ ಮೌಲ್ಯಗಳನ್ನು ಜೀವಿಸುವ ಮತ್ತು ಉಳಿಸುವ ಕೆಲಸ ಮಾಡೋಣ.ನಮ್ಮ ಭಾರತೀಯ ಸಂಸ್ಕೃತಿಯ ಸಹಿಷ್ಣುತೆಯ ಸಹಬಾಳ್ವೆಯ ಮತ್ತು ಭಕ್ತಿಯ ಪ್ರತೀಕ. ಈ ಮಹಾಕುಂಭ ಮೇಳದ ಶುಭ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ, ಪರಸ್ಪರ ಪ್ರೀತಿ, ನಿಷ್ಠೆ ಮತ್ತು ಸಹಕಾರದೊಂದಿಗೆ ಬದುಕೋಣ’ ಎಂಬ ಸಂದೇಶವನ್ನು ಹಾಕಿದ್ದಾರೆ.