ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಕಾಗೋಡು ತಿಮ್ಮಪ್ಪ ಮನೆಗೆ ಸಚಿವರ ಭೇಟಿ : ಮನೆಗೇ ಬಂದು ಪ್ರಶಸ್ತಿ ಪ್ರದಾನ ಮಾಡಲಿದೆ ಸರ್ಕಾರ!
ಹೆಲಿಕಾಪ್ಟರ್ ವ್ಯವಸ್ಥೆಯ ಪ್ರಸ್ತಾಪಕ್ಕೆ ಕಾಗೋಡು ತಿಮ್ಮಪ್ಪರ ಸರಳ ಉತ್ತರ – ಏನದು? | Veteran leader Kagodu Thimmappa receives Karnataka Rajyotsava Award. Minister Madhu Bangarappa visits his residence in Sagar and announces that the government will present the award at his home.
ಸಾಗರ, ಅ.31: ಹಿರಿಯ ಸಮಾಜವಾದಿ ಚಿಂತಕ, ಮಾಜಿ ಸಚಿವ ಹಾಗೂ ವಿಧಾನಸಭೆಯ ಮಾಜಿ ಸ್ಪೀಕರ್ ಡಾ. ಕಾಗೋಡು ತಿಮ್ಮಪ್ಪ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಾಗರದಲ್ಲಿರುವ ಕಾಗೋಡು ತಿಮ್ಮಪ್ಪ ಅವರ ನಿವಾಸಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಸಚಿವ ಮಧು ಬಂಗಾರಪ್ಪ ಅವರು ವಿಡಿಯೋ ಕರೆ ಮಾಡಿಸಿ, ಕಾಗೋಡು ತಿಮ್ಮಪ್ಪ ಅವರೊಂದಿಗೆ ಮಾತನಾಡಿಸಿದರು. ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದಕ್ಕೆ ಮುಖ್ಯಮಂತ್ರಿ ಶುಭಾಶಯ ತಿಳಿಸಿ, ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ಕಾಗೋಡು ತಿಮ್ಮಪ್ಪ ಅವರ ಸೇವೆ ಅನುಕರಣೀಯವಾಗಿದೆ. ಭಗವಂತ ನಿಮಗೆ ಉತ್ತಮ ಆರೋಗ್ಯ ನೀಡಲಿ, ನಿಮ್ಮ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದು ಹಾರೈಸಿದರು.
ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿಗೆ ಆಗಮಿಸುವುದು ಕಷ್ಟವಾಗಬಹುದೆಂಬ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಬೇಕೇ ಎಂದು ಮುಖ್ಯಮಂತ್ರಿ ವಿಚಾರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಗೋಡು ತಿಮ್ಮಪ್ಪ ಅವರು, “ಬೇಡ, ನಾನು ಹೇಗೋ ಬರುತ್ತೇನೆ” ಎಂದು ತಮ್ಮ ಸರಳತೆಯನ್ನು ಮೆರೆದರು.
ಕಾಗೋಡು ಅವರ ಮನೆಗೇ ತೆರಳಿ ಪ್ರಶಸ್ತಿ ಪ್ರದಾನ: ಮಧು ಬಂಗಾರಪ್ಪ
ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಕಾಗೋಡು ತಿಮ್ಮಪ್ಪ ಅವರು ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಾಗಿ ಬೆಂಗಳೂರಿಗೆ ಆಗಮಿಸಿ ಪ್ರಶಸ್ತಿ ಸ್ವೀಕರಿಸಲು ಅವರಿಗೆ ತೊಂದರೆಯಾಗಬಹುದು. ಈ ಹಿನ್ನೆಲೆಯಲ್ಲಿ ಸರ್ಕಾರವೇ ಅವರ ಮನೆಗೆ ತೆರಳಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಈ ವೇಳೆ ಕಾಗೋಡು ತಿಮ್ಮಪ್ಪ ಅವರು ಸಚಿವ ಮಧು ಬಂಗಾರಪ್ಪ ಅವರ ಕೈಗೆ ಮುತ್ತಿಟ್ಟು ಆತ್ಮೀಯವಾಗಿ ಮಾತನಾಡಿದರು. “ಸಣ್ಣ ವಯಸ್ಸಿನಲ್ಲೇ ಸಚಿವರಾಗಿದ್ದೀರಿ. ಒಳ್ಳೆಯ ಕೆಲಸ ಮಾಡಿ, ರಾಜಕೀಯದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಿರಿ” ಎಂದು ಆಶೀರ್ವದಿಸಿದರು. ಹಿರಿಯ ನಾಯಕನ ಈ ಆತ್ಮೀಯತೆ ಮತ್ತು ಆಶೀರ್ವಾದದ ಕ್ಷಣ ಎಲ್ಲರ ಗಮನ ಸೆಳೆಯಿತು.
ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವ ಭರವಸೆ
ಇದೇ ಸಂದರ್ಭದಲ್ಲಿ ಶರಾವತಿ ಸಂತ್ರಸ್ತರಿಗೆ ಭೂಹಕ್ಕು ನೀಡುವ ವಿಚಾರವಾಗಿಯೂ ಸಚಿವ ಮಧು ಬಂಗಾರಪ್ಪ ಅವರು ಕಾಗೋಡು ತಿಮ್ಮಪ್ಪ ಅವರೊಂದಿಗೆ ಚರ್ಚಿಸಿದರು.
“ಶರಾವತಿ ಸಂತ್ರಸ್ತರಿಗೆ ಭೂಹಕ್ಕು ನೀಡುವ ಸಂಬಂಧ ಸಮಗ್ರವಾಗಿ ಪರಿಶೀಲನೆ ನಡೆಸಿ ಪ್ರಸ್ತಾವನೆ ಸಿದ್ಧಪಡಿಸಿದ್ದೇವೆ. ಶೀಘ್ರದಲ್ಲೇ ಸಚಿವ ಸಂಪುಟದ ಒಪ್ಪಿಗೆ ಪಡೆದು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುತ್ತೇವೆ. ಸಂತ್ರಸ್ತರಿಗೆ ಹಕ್ಕುಪತ್ರ ದೊರೆಯುವಂತೆ ಮಾಡಿ, ನಿಮ್ಮ ಬಹುದಿನಗಳ ಕನಸನ್ನು ನನಸು ಮಾಡುತ್ತೇವೆ” ಎಂದು ಸಚಿವರು ಭರವಸೆ ನೀಡಿದರು.
ಕರ್ನಾಟಕ ಸರ್ಕಾರ ಪ್ರತಿ ವರ್ಷ ನವೆಂಬರ್ 1ರಂದು ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತದೆ.
ಈ ಬಾರಿಯ ಪ್ರಶಸ್ತಿ ಪಟ್ಟಿಯಲ್ಲಿ ಸಮಾಜಸೇವೆ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಡಾ. ಕಾಗೋಡು ತಿಮ್ಮಪ್ಪ ಅವರ ಹೆಸರೂ ಸೇರ್ಪಡೆಯಾಗಿದೆ.
ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಕ್ಕುಗಳಿಗಾಗಿ ಹೋರಾಡಿದ ಕಾಗೋಡು ತಿಮ್ಮಪ್ಪ ಅವರು ಸಾಮಾಜಿಕ ನ್ಯಾಯ, ಜನಪರ ಚಿಂತನೆ ಹಾಗೂ ಸರಳ ಜೀವನದ ಮೂಲಕ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಸುದೀರ್ಘ ಸಾರ್ವಜನಿಕ ಸೇವೆ ಮತ್ತು ಹೋರಾಟದ ಬದುಕಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಅವರ ಅಭಿಮಾನಿಗಳು ಹಾಗೂ ಬೆಂಬಲಿಗರಲ್ಲಿ ಸಂತಸ ಮೂಡಿಸಿದೆ.
