ಗ್ರಾಮೀಣ ಜೀವಗಳ ರಕ್ಷಣೆಗೆ ಮಿಡಿದ ಮಾನವೀಯ ಹೃದಯಗಳು: ಹುಂಚ ಸರ್ಕಾರಿ ಆಸ್ಪತ್ರೆಗೆ 33.75 ಲಕ್ಷ ರೂ. ವೆಚ್ಚದ ಹೈಟೆಕ್ ಆಂಬ್ಯುಲೆನ್ಸ್ ಕೊಡುಗೆ! | Humcha Government Primary Health Centre receives a state-of-the-art ambulance worth Rs. 33.75 lakh, donated by Atul Bhirangi and Care Trust to improve emergency healthcare services in rural Shivamogga.
ರಿಪ್ಪನ್ಪೇಟೆ: “ಸಂಪತ್ತು ಎನ್ನುವುದು ಕೇವಲ ಸ್ವಂತದ ಐಷಾರಾಮಿ ಜೀವನಕ್ಕಲ್ಲ, ಬದಲಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸಲು ಬಳಕೆಯಾದಾಗ ಮಾತ್ರ ಅದಕ್ಕೊಂದು ಸಾರ್ಥಕತೆ ಸಿಗುತ್ತದೆ” ಎಂಬ ಮಾತಿಗೆ ಬೆಂಗಳೂರಿನ ಪ್ರಗತಿ ಆಟೋಮೇಷನ್ನ ವ್ಯವಸ್ಥಾಪಕ ನಿರ್ದೇಶಕರಾದ ಅತುಲ್ ಭೀರಂಗಿ ದಂಪತಿಗಳು ಹಾಗೂ ‘ಕೇರ್ ಟ್ರಸ್ಟ್’ ಸಂಸ್ಥೆ ಸಾಕ್ಷಿಯಾಗಿದ್ದಾರೆ.
ಗ್ರಾಮೀಣ ಭಾಗದ ಜನರಿಗೆ ತುರ್ತು ಸಂದರ್ಭದಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಗದೆ ಎಷ್ಟೋ ಪ್ರಾಣಗಳು ಪಕ್ಷಿಯಂತೆ ಹಾರಿಹೋಗುತ್ತವೆ. ಇಂತಹ ಗಂಭೀರ ಸಮಸ್ಯೆಯನ್ನು ಅರಿತು, ನಗರ ಪ್ರದೇಶದ ಶ್ರೀಮಂತರಿಗೆ ಹಾಗೂ ಗಣ್ಯಾತಿಗಣ್ಯರಿಗೆ ಮಾತ್ರ ಸೀಮಿತವಾಗಿದ್ದ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯವನ್ನು ಹಳ್ಳಿಗಾಡಿನ ಜನರಿಗೂ ತಲುಪಿಸಬೇಕೆಂಬ ಉದಾತ್ತ ಆಶಯದೊಂದಿಗೆ ಹುಂಚದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತ ಆಂಬ್ಯುಲೆನ್ಸ್ ಅನ್ನು ಕೊಡುಗೆಯಾಗಿ ನೀಡಲಾಗಿದೆ.
ಸ್ಥಳೀಯ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ಜೀವರಕ್ಷಕ ವಾಹನವನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಯಿತು.
ಕೇರ್ ಟ್ರಸ್ಟ್ ಮತ್ತು ಅತುಲ್ ಭೀರಂಗಿ ಅವರ ನಿಸ್ವಾರ್ಥ ಸೇವೆ:
ಕೇರ್ ಟ್ರಸ್ಟ್ ಸಂಸ್ಥೆಯ ಸಮರ್ಥ ಮುಂದಾಳತ್ವದಲ್ಲಿ ಹಾಗೂ ದಾನಿಗಳಾದ ಅತುಲ್ ಭೀರಂಗಿ ಅವರ ಉದಾರ ಧನಸಹಾಯದಿಂದ ಬರೋಬ್ಬರಿ 33.75 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ತುರ್ತು ಸಂಚಾರಿ ವಾಹನವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯವಾಗಿ ವಿಐಪಿಗಳ ಬೆಂಗಾವಲು ಪಡೆಯಲ್ಲಿ ಮಾತ್ರ ಕಾಣಸಿಗುವ ಇಂತಹ ಹೈಟೆಕ್ ವಾಹನವನ್ನು ಗ್ರಾಮೀಣ ಜನರ ಸೇವೆಗೆ ಮುಡಿಪಾಗಿಟ್ಟಿರುವುದು ದಾನಿಗಳ ಸಾಮಾಜಿಕ ಕಳಕಳಿ ಮತ್ತು ಹೃದಯ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿಯಾಗಿದೆ.
ಈ ವಾಹನವು ಕೇವಲ ಸಾರಿಗೆ ವಾಹನವಲ್ಲ, ಇದೊಂದು ಚಲಿಸುವ ತುರ್ತು ಚಿಕಿತ್ಸಾ ಘಟಕ (ICU on Wheels). ಇದರಲ್ಲಿ ಇಸಿಜಿ (ECG), ವೆಂಟಿಲೇಟರ್ ಸೇರಿದಂತೆ ಒಟ್ಟು 11 ಬಗೆಯ ಅತ್ಯಾಧುನಿಕ ಜೀವರಕ್ಷಕ ಪರಿಕರಗಳನ್ನು ಅಳವಡಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಇದುವರೆಗೆ ಇಂತಹ 3 ವಾಹನಗಳಿದ್ದು, ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಶೇಷತೆಯಲ್ಲಿ ಹುಂಚಕ್ಕೆ ನೀಡಿರುವ ಈ ನಾಲ್ಕನೇ ವಾಹನವು ಜಿಲ್ಲೆಯಲ್ಲೇ ಮೊದಲನೆಯದಾಗಿದೆ ಎಂಬುದು ಹೆಮ್ಮೆಯ ಸಂಗತಿ.
ವಾಹನ ಹಸ್ತಾಂತರಿಸಿ ಮಾತನಾಡಿದ ದಾನಿ ಅತುಲ್ ಭೀರಂಗಿ ಅವರು, “ಗ್ರಾಮೀಣ ಭಾಗದ ಬಡ ರೋಗಿಗಳಿಗೂ ಉನ್ನತ ಮಟ್ಟದ ತುರ್ತು ಚಿಕಿತ್ಸೆ ದೊರೆಯಬೇಕು ಎಂಬ ಕನಸಿನೊಂದಿಗೆ ಈ ವಾಹನವನ್ನು ಹುಂಚ ಆಸ್ಪತ್ರೆಗೆ ನೀಡುತ್ತಿರುವುದು ನಮಗೆ ಆತ್ಮತೃಪ್ತಿ ತಂದಿದೆ. ಆದರೆ, ಈ ವಾಹನದ ಸಮರ್ಪಕ ಬಳಕೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಇಲ್ಲಿನ ಆಡಳಿತ ವ್ಯವಸ್ಥೆ ಕಾಳಜಿಯಿಂದ ನಿರ್ವಹಿಸಬೇಕು” ಎಂದು ಕಿವಿಮಾತು ಹೇಳಿದರು. ಅವರ ಈ ಮಾತುಗಳಲ್ಲಿ ಗ್ರಾಮೀಣ ಜನರ ಬಗೆಗಿನ ನೈಜ ಕಾಳಜಿ ಎದ್ದು ಕಾಣುತ್ತಿತ್ತು.
ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ ನಾಯಕ ಅವರು ಮಾತನಾಡಿ, “ಗ್ರಾಮೀಣರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಇಷ್ಟೊಂದು ದೊಡ್ಡ ಮೊತ್ತದ ವಾಹನವನ್ನು ಕೊಡುಗೆಯಾಗಿ ನೀಡಿದ ಅತುಲ್ ಭೀರಂಗಿ ದಂಪತಿಗಳಾದಿಯಾಗಿ, ಈ ಪುಣ್ಯಕಾರ್ಯಕ್ಕೆ ಬೆನ್ನೆಲುಬಾಗಿ ನಿಂತ ಕೇರ್ ಟ್ರಸ್ಟ್ನ ಪದಾಧಿಕಾರಿಗಳ ಸೇವೆ ಸಮಾಜಕ್ಕೆ ಮಾದರಿಯಾದುದು. ಜೀವ ಅಮೂಲ್ಯವಾಗಿದ್ದು, ಅಪಘಾತ ಅಥವಾ ತೀವ್ರ ಅನಾರೋಗ್ಯದ ‘ಗೋಲ್ಡನ್ ಅವರ್’ (ಬಂಗಾರದ ಕ್ಷಣ) ಸಮಯದಲ್ಲಿ ಪ್ರಾಣ ಉಳಿಸಲು ಈ ವಾಹನ ವರದಾನವಾಗಲಿದೆ. ಸಾರ್ವಜನಿಕರು ಇದನ್ನು ಸಣ್ಣಪುಟ್ಟ ಕಾರಣಗಳಿಗೆ ಬಳಸಿ ದುರ್ಬಳಕೆ ಮಾಡಿಕೊಳ್ಳದೆ, ಗಂಭೀರ ಆರೋಗ್ಯ ಸಮಸ್ಯೆಗಳಿದ್ದಾಗ ಮಾತ್ರ ಬಳಸಿಕೊಳ್ಳಬೇಕು” ಎಂದು ಮನವಿ ಮಾಡಿದರು.
ತಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜಕ್ಕೆ ಮರಳಿ ನೀಡುವ ಮೂಲಕ ಅತುಲ್ ಭೀರಂಗಿ ಮತ್ತು ಕೇರ್ ಟ್ರಸ್ಟ್ ತಂಡವು ಇತರ ಉದ್ಯಮಿಗಳಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ದೊಡ್ಡ ಪ್ರೇರಣೆಯಾಗಿದ್ದಾರೆ.
ಇದೇ ಸಂಧರ್ಭದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಐದು ಎಕರೆ ಜಾಗ ದಾನ ಮಾಡಿದ ನಿವೃತ ಶಿಕ್ಷಕಿ ಸುಮಿತ್ರಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಶಾಂತರಾಜ್, ಡಾ. ನಿತೀಶ್ ಭಟ್, ಜೈನ ಮಠದ ಆಡಳಿತಾಧಿಕಾರಿ ಅಶೋಕ್ ಕುಮಾರ್,ಹುಂಚ ಗ್ರಾಪಂ ನಿಕಟಪೂರ್ವ ಅಧ್ಯಕ್ಷೆ ಸುಮಾ , ಮಾಜಿ ಸದಸ್ಯೆ ಯಶಸ್ವತಿ ಜೈನ್ , ಕೇರ್ ಟ್ರಸ್ಟ್ನ ಗುರುರಾಜ, ಅಪರ್ಣ, ರವೀಂದ್ರ ಭಗತ್, ಶಿಕ್ಷಕರಾದ ದಿನೇಶ, ದೇವೇಂದ್ರ, ಅಭಿಷೇಕ್ , ಚಂದ್ರಶೇಖರ,ಸತೀಶ್ ಈರನಬೈಲು , ಶ್ರೀಕಾಂತ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ದಾನಿಗಳ ಕಾರ್ಯವನ್ನು ಶ್ಲಾಘಿಸಿದರು.
