ಗೃಹಲಕ್ಷ್ಮಿ 33ನೇ ಕಂತಿನ ಹಣ ಬಿಡುಗಡೆ: ಶಿವಮೊಗ್ಗ ಜಿಲ್ಲೆಯ 3.78 ಲಕ್ಷ ಮಹಿಳೆಯರಿಗೆ ₹75.60 ಕೋಟಿ ಜಮೆ | Karnataka’s Gruha Lakshmi scheme releases its 33rd installment, depositing ₹75.60 crore into the bank accounts of 378,031 eligible women beneficiaries in Shivamogga district.
ಶಿವಮೊಗ್ಗ: ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಶಿವಮೊಗ್ಗ ಜಿಲ್ಲೆಯ 3,78,031 ಅರ್ಹ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ತಲಾ ₹2,000ರಂತೆ ಒಟ್ಟು ₹75.60 ಕೋಟಿ ಹಣ ಜಮೆಯಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ ತಿಳಿಸಿದ್ದಾರೆ.
ಮಹಿಳೆಯರ ಆರ್ಥಿಕ ಸ್ವಾವಲಂಬನೆ ಮತ್ತು ಸಬಲೀಕರಣವನ್ನು ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಅರ್ಹ ಮಹಿಳಾ ಫಲಾನುಭವಿಗಳಿಗೆ ಪ್ರತಿ ತಿಂಗಳು ₹2,000 ನೀಡಲಾಗುತ್ತಿದೆ.
ಇಲ್ಲಿಯವರೆಗೆ 32 ಕಂತುಗಳಲ್ಲಿ ಪ್ರತಿ ಫಲಾನುಭವಿಗೆ ತಲಾ ₹2,000ರಂತೆ ಒಟ್ಟು ₹64,000 ಪಾವತಿಸಲಾಗಿದೆ. ಇದೀಗ 33ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಜಿಲ್ಲೆಯ ಒಟ್ಟು 3,78,031 ಮಹಿಳೆಯರ ಖಾತೆಗಳಿಗೆ ₹75,60,62,000 ಹಣವನ್ನು ನೇರ ನಗದು ವರ್ಗಾವಣೆ (DBT) ಮೂಲಕ ಜಮೆ ಮಾಡಲಾಗಿದೆ.
ದಸರಾ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಾಗಿರುವುದು ಮಹಿಳೆಯರಿಗೆ ಆರ್ಥಿಕ ನೆರವು ನೀಡಿದಂತಾಗಿದೆ. ಹಬ್ಬದ ಖರ್ಚುಗಳಿಗೆ ಈ ಹಣ ಸಹಕಾರಿಯಾಗಲಿದೆ ಎಂದು ಸಿ.ಎಸ್. ಚಂದ್ರಭೂಪಾಲ ತಿಳಿಸಿದ್ದಾರೆ.
