w
Headlines
Home » ಹೊಂಬುಜ ಕ್ಷೇತ್ರದಲ್ಲಿ ಜೀವದಯಾಷ್ಟಮಿ ಆಚರಣೆ: ಜೀವಕಾರುಣ್ಯದಿಂದ ಮೈತ್ರಿಭಾವದ ಜೀವನ ಪವಿತ್ರ – ಹೊಂಬುಜ ಶ್ರೀಗಳು

ಹೊಂಬುಜ ಕ್ಷೇತ್ರದಲ್ಲಿ ಜೀವದಯಾಷ್ಟಮಿ ಆಚರಣೆ: ಜೀವಕಾರುಣ್ಯದಿಂದ ಮೈತ್ರಿಭಾವದ ಜೀವನ ಪವಿತ್ರ – ಹೊಂಬುಜ ಶ್ರೀಗಳು

GridArt 20261018

ಹೊಂಬುಜ ಕ್ಷೇತ್ರದಲ್ಲಿ ಜೀವದಯಾಷ್ಟಮಿ ಆಚರಣೆ: ಜೀವಕಾರುಣ್ಯದಿಂದ ಮೈತ್ರಿಭಾವದ ಜೀವನ ಪವಿತ್ರ – ಹೊಂಬುಜ ಶ್ರೀಗಳು

ರಿಪ್ಪನ್‌ಪೇಟೆ (ಹೊಂಬುಜ): ಸಕಲ ಜೀವರಾಶಿಗಳಲ್ಲಿ ಜೀವಕಾರುಣ್ಯ ಭಾವವನ್ನು ಬೆಳೆಸುವ ಮೂಲಕ ಅಹಿಂಸಾ ತತ್ವವನ್ನು ವೃದ್ಧಿಸಿ, ಪರಸ್ಪರ ಮೈತ್ರಿಭಾವದಿಂದ ಬದುಕಬೇಕು. ದ್ವೇಷ, ಅಸೂಯೆ ಮತ್ತು ಹಿಂಸೆಯನ್ನು ತೊರೆದು, ಪರಸ್ಪರ ಗೌರವ ಹಾಗೂ ಅನ್ಯೋನ್ಯತೆಯಿಂದ ಜೀವನ ನಡೆಸಿದಾಗ ಬದುಕು ಪಾವನವಾಗುತ್ತದೆ ಎಂದು ಹೊಂಬುಜ ಜೈನ ಮಠದ ಮಠಾಧೀಶರಾದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.

ಅತಿಶಯ ಶ್ರೀಕ್ಷೇತ್ರ ಹೊಂಬುಜದ ಜೈನ ಮಠದಲ್ಲಿ ಶರನ್ನವರಾತ್ರಿ ಮತ್ತು ವಿಜಯದಶಮಿ ಉತ್ಸವದ ಎಂಟನೇ ದಿನದ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ, ಜೀವದಯಾಷ್ಟಮಿ ಆಚರಣೆಯ ಮಹತ್ವವನ್ನು ತಿಳಿಸುತ್ತಾ ಶ್ರೀಗಳು ಮಾತನಾಡಿದರು.

ಜೈನಾಗಮ ಪರಂಪರೆಯಂತೆ ಜೀವದಯಾಷ್ಟಮಿಯನ್ನು ಆಚರಿಸಲಾಗುತ್ತದೆ. ಸಕಲ ಜೀವಿಗಳ ಮೇಲಿನ ಕರುಣೆ, ಅಹಿಂಸೆ ಮತ್ತು ಮೈತ್ರಿಭಾವವು ಮಾನವೀಯ ಮೌಲ್ಯಗಳನ್ನು ವೃದ್ಧಿಸುತ್ತವೆ. ಪ್ರತಿಯೊಬ್ಬರೂ ದ್ವೇಷ ಹಾಗೂ ಅಸೂಯೆಗಳನ್ನು ತೊರೆದು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಗೌರವದಿಂದ ಬದುಕಬೇಕು ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಭಕ್ತರು ವಿವಿಧ ಧಾನ್ಯಗಳನ್ನು ಸಮರ್ಪಿಸಿದರು. ಸಾತ್ವಿಕ ಆಹಾರ ಸೇವನೆಯು ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒದಗಿಸುವುದರೊಂದಿಗೆ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ ಎಂದು ಶ್ರೀಗಳು ತಿಳಿಸಿದರು.

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ನೇಮಿನಾಥ ತೀರ್ಥಂಕರ, ಶ್ರೀ ಮಹಾವೀರ ತೀರ್ಥಂಕರ, ಶ್ರೀ ಆದಿನಾಥ ತೀರ್ಥಂಕರ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಹಾಗೂ ಶ್ರೀ ನಾಗಸನ್ನಿಧಿಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ಶ್ರೀಮತಿ ಉಷಾರಾಣಿ ಅವರು ಶ್ರೀಕ್ಷೇತ್ರ ಹೊಂಬುಜಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಜೈನ ಮಠದ ಶ್ರೀಗಳು ಅವರನ್ನು ಗೌರವಿಸಿ, ಸನ್ಮಾನಿಸಿ ಶ್ರೀಫಲ ಹಾಗೂ ಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.