ಹೋಟೆಲ್, ಸರ್ಕಾರಿ ಹಾಸ್ಟೆಲ್‌ಗಳಿಗೆ ಅಧಿಕಾರಿಗಳ ದಿಢೀರ್ ಭೇಟಿ: ಆಹಾರ ಸುರಕ್ಷತೆ ಪರಿಶೀಲನೆ
Shivamogga officials led by SDO Dr. Maitri conducted surprise inspections of hotels and institutions to ensure food safety, hygiene and sanitation standards.
ಶಿವಮೊಗ್ಗ: ಆಹಾರ ಉದ್ಯಮಗಳಲ್ಲಿ ಆಹಾರ ಸುರಕ್ಷತೆ, ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದ ಲೋಪದೋಷಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ. ಮೈತ್ರಿ ಅವರ ನೇತೃತ್ವದ ತಂಡ ವಿವಿಧ ಹೋಟೆಲ್‌ಗಳು ಹಾಗೂ ಸರ್ಕಾರಿ ಸಂಸ್ಥೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿತು.
ವಿಶೇಷ ಆಹಾರ ಸುರಕ್ಷತಾ ತಪಾಸಣಾ ಅಭಿಯಾನದ ಅಂಗವಾಗಿ ಅಧಿಕಾರಿಗಳು ಮಾನವ ಸೇವನೆಗೆ ಯೋಗ್ಯವಾದ ಆಹಾರ ಪದಾರ್ಥಗಳನ್ನು ತಯಾರಿಸುವ, ಸಂಗ್ರಹಿಸುವ ಹಾಗೂ ಮಾರಾಟ ಮಾಡುವ ಸ್ಥಳಗಳಿಗೆ ಭೇಟಿ ನೀಡಿದರು. ಈ ವೇಳೆ ಆಹಾರ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೋಟೆಲ್ ಮಾಲೀಕರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಅವಧಿ ಮೀರಿದ ಹಾಗೂ ಬಳಕೆಗೆ ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ತಕ್ಷಣ ಪ್ರತ್ಯೇಕಿಸಿ, ಅವುಗಳನ್ನು ಆಹಾರ ತಯಾರಿಕೆ ಅಥವಾ ಮಾರಾಟದಲ್ಲಿ ಬಳಸದೇ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಡಾ. ಮೈತ್ರಿ ಸೂಚಿಸಿದರು.
ಆಹಾರ ಪದಾರ್ಥಗಳನ್ನು ಸೂಕ್ತ ತಾಪಮಾನದಲ್ಲಿ, ಸ್ವಚ್ಛ ಹಾಗೂ ಆಹಾರ ಸುರಕ್ಷಿತ ಕಂಟೇನರ್‌ಗಳಲ್ಲಿ ಸಂಗ್ರಹಿಸಬೇಕು. ಅಡುಗೆಮನೆ, ಆಹಾರ ತಯಾರಿಕಾ ಸ್ಥಳ ಹಾಗೂ ಸಂಗ್ರಹಣಾ ಪ್ರದೇಶಗಳನ್ನು ಸ್ವಚ್ಛ ಮತ್ತು ಶುಷ್ಕ ವಾತಾವರಣದಲ್ಲಿ ನಿರ್ವಹಿಸಬೇಕು ಎಂದು ತಿಳಿಸಿದರು.
ಹಾಲು, ಮಾಂಸ, ಮೊಟ್ಟೆ ಹಾಗೂ ಸಿದ್ಧ ಆಹಾರಗಳನ್ನು ನಿಗದಿತ ತಾಪಮಾನದಲ್ಲಿ ಸಂಗ್ರಹಿಸಬೇಕು. ರೆಫ್ರಿಜರೇಟರ್, ಕೂಲರ್ ಸೇರಿದಂತೆ ತಾಪಮಾನ ನಿಯಂತ್ರಣ ಸಾಧನಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಆಹಾರ ಸಂರಕ್ಷಣೆ ಮತ್ತು ಕುಡಿಯುವ ನೀರಿನ ಗುಣಮಟ್ಟದ ಬಗ್ಗೆಯೂ ಸೂಕ್ತ ಗಮನ ಹರಿಸುವಂತೆ ಸೂಚಿಸಲಾಯಿತು.
ಆಹಾರ ನಿರ್ವಹಿಸುವ ಸಿಬ್ಬಂದಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಬೇಕು. ಸುರಕ್ಷಿತ ಆಹಾರ ನಿರ್ವಹಣಾ ವಿಧಾನಗಳ ಕುರಿತು ಅಗತ್ಯ ತರಬೇತಿ ನೀಡಬೇಕು ಎಂದು ಅಧಿಕಾರಿಗಳು ಸೂಚಿಸಿದರು.
ತಪಾಸಣೆ ವೇಳೆ ಕಂಡುಬಂದ ಲೋಪದೋಷಗಳನ್ನು 10 ದಿನಗಳೊಳಗೆ ಸರಿಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಆಹಾರ ಸುರಕ್ಷತಾ ಮಾನದಂಡಗಳ ಅನ್ವಯ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಡಾ. ಮೈತ್ರಿ ಹೋಟೆಲ್ ಉದ್ಯಮಿಗಳಿಗೆ ಎಚ್ಚರಿಕೆ ನೀಡಿದರು.
ದಿಢೀರ್ ತಪಾಸಣೆ ವೇಳೆ ತಾಲೂಕು ದಂಡಾಧಿಕಾರಿ ವಿ.ಎಸ್. ರಾಜೀವ್, ತಾಲೂಕು ಆರೋಗ್ಯಾಧಿಕಾರಿ ಚಂದ್ರಶೇಖರ್, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಸಿಬ್ಬಂದಿ, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.
ತಂಡವು ಹೋಟೆಲ್ ಹರ್ಷ ಫರ್ನ್, ತಾವರೆಕೊಪ್ಪದ ನಿರಾಶ್ರಿತರ ಪರಿಹಾರ ಕೇಂದ್ರ, ವಿನೋಬನಗರದ ಸವಿ ಬೇಕರಿ ಹಾಗೂ ಗಾಂಧಿನಗರದ ವಿಧಾತ್ರಿ ಭವನ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.