w
Headlines
Home » ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ: ಭುವನೇಶ್ವರಿ ಮೆರವಣಿಗೆಗೆ ಜಾನಪದ ಕಲಾತಂಡಗಳ ಮೆರುಗು!

ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ: ಭುವನೇಶ್ವರಿ ಮೆರವಣಿಗೆಗೆ ಜಾನಪದ ಕಲಾತಂಡಗಳ ಮೆರುಗು!

Screenshot 2026 11 01 18 37 38 871 com.openai.chatgpt edit

ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ: ಭುವನೇಶ್ವರಿ ಮೆರವಣಿಗೆಗೆ ಜಾನಪದ ಕಲಾತಂಡಗಳ ಮೆರುಗು! | Kannada Rajyotsava was celebrated grandly in Ripponpete with a spectacular Bhuvaneshwari procession, folk performances, cultural programs and flag hoisting by MLA Gopalakrishna Beluru.

ರಿಪ್ಪನ್‌ಪೇಟೆ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಸ್ತೂರಿ ಕನ್ನಡ ಸಂಘದ ವತಿಯಿಂದ ರಿಪ್ಪನ್‌ಪೇಟೆಯಲ್ಲಿ ಕನ್ನಡ ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ನೂರಾರು ವಿದ್ಯಾರ್ಥಿಗಳು, ಕನ್ನಡಾಭಿಮಾನಿಗಳು ಹಾಗೂ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಂಡು ಕನ್ನಡದ ಸಂಭ್ರಮವನ್ನು ಹೆಚ್ಚಿಸಿದರು.

ಕನ್ನಡ ತಾಯಿ ಭುವನೇಶ್ವರಿಯ ಮೆರವಣಿಗೆಗೆ ಪಟ್ಟಣದ ಪಿಎಸ್‌ಐ ರಾಜುರೆಡ್ಡಿ ಚಾಲನೆ ನೀಡಿದರು. ನೂರಾರು ಪುಟಾಣಿ ಮಕ್ಕಳು ಭುವನೇಶ್ವರಿ ದೇವಿ, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ರಾಷ್ಟ್ರಪುರುಷರ ವೇಷಭೂಷಣ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷ ಆಕರ್ಷಣೆಯಾಗಿತ್ತು.

ಮೆರವಣಿಗೆಯುದ್ದಕ್ಕೂ ಡೊಳ್ಳು ಕುಣಿತ, ಕೋಲಾಟ, ಜಾನಪದ ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಲಾತಂಡಗಳ ಪ್ರದರ್ಶನಗಳು ಜನರ ಗಮನ ಸೆಳೆದವು. ಆಲುವಳ್ಳಿ ಮಕ್ಕಳ ತಂಡ ಕನ್ನಡ ಗೀತೆಗಳಿಗೆ ನೃತ್ಯದೊಂದಿಗೆ ಕೋಲಾಟ ಪ್ರದರ್ಶಿಸಿತು. ಶಾಲಾ ವಿದ್ಯಾರ್ಥಿಗಳಿಂದ ಕನ್ನಡ ನುಡಿಗಟ್ಟುಗಳ ಪಥಸಂಚಲನ ನಡೆಯಿತು. ಮಹಿಳೆಯರು ಸೇರಿದಂತೆ ಪಟ್ಟಣದ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

ಕನ್ನಡನಾಡಿನ ಬಾವುಟಗಳಿಂದ ಅಲಂಕೃತಗೊಂಡಿದ್ದ ಪಟ್ಟಣದ ಪ್ರಮುಖ ರಸ್ತೆಗಳು ಕನ್ನಡದ ಸಂಭ್ರಮದಲ್ಲಿ ಮಿಂದೆದ್ದವು. ಮೆರವಣಿಗೆಯುದ್ದಕ್ಕೂ ಮೊಳಗಿದ ‘ಜೈ ಕನ್ನಡ ಮಾತೆ’ ಘೋಷಣೆಗಳು ರಾಜ್ಯೋತ್ಸವದ ಸಂಭ್ರಮವನ್ನು ಇಮ್ಮಡಿಗೊಳಿಸಿದವು.

ಮೆರವಣಿಗೆಯ ಸಮಾರೋಪದ ಬಳಿಕ ಪಟ್ಟಣದ ವಿನಾಯಕ ವೃತ್ತದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಕನ್ನಡಪರ ಸಂಘಟನೆಗಳು ಸಮಾಜಮುಖಿ ಕಾರ್ಯಗಳ ಮೂಲಕ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದಾಗ ಸಮಾಜದಿಂದ ಉತ್ತಮ ಬೆಂಬಲ ದೊರೆಯುತ್ತದೆ. ಕರ್ನಾಟಕದ ಅನೇಕ ಭಾಗಗಳಲ್ಲಿ ಅನ್ಯಭಾಷೆಗಳ ಪ್ರಭಾವ ಹೆಚ್ಚಾಗುತ್ತಿದ್ದು, ಕನ್ನಡಿಗರು ಎಚ್ಚೆತ್ತುಕೊಂಡು ನಮ್ಮ ನಾಡಿನ ಭಾಷೆ ಕನ್ನಡವನ್ನು ಉಳಿಸಿ ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಒಂದು ವರ್ಷದಲ್ಲಿ ವಾರ್ಡ್‌ಗಳ ಎಲ್ಲಾ ರಸ್ತೆಗಳ ಅಭಿವೃದ್ಧಿ: ಶಾಸಕ ಬೇಳೂರು ಭರವಸೆ

ರಿಪ್ಪನ್‌ಪೇಟೆ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಈಗಾಗಲೇ ಸಾಕಷ್ಟು ಅನುದಾನ ಒದಗಿಸಲಾಗಿದ್ದು, ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಅನುದಾನ ತಂದು ಪಟ್ಟಣವನ್ನು ಅಭಿವೃದ್ಧಿಪಡಿಸುವ ಸಂಕಲ್ಪ ಹೊಂದಿದ್ದೇನೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಇನ್ನೂ ಒಂದು ವರ್ಷದೊಳಗೆ ಪಟ್ಟಣದ ಎಲ್ಲಾ ವಾರ್ಡ್‌ಗಳ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ ಅವರು, ನಿಗದಿತ ಅವಧಿಯಲ್ಲಿ ಎಲ್ಲಾ ವಾರ್ಡ್‌ಗಳ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸದಿದ್ದರೆ ರಿಪ್ಪನ್‌ಪೇಟೆಗೆ ಕಾಲಿಡುವುದಿಲ್ಲ ಎಂದು ಹೇಳುವ ಮೂಲಕ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಕೆರೆಹಳ್ಳಿ ದೇವರಾಜ್, ಸಂಸ್ಥಾಪಕ ಅಧ್ಯಕ್ಷ ಆರ್.ಎ. ಚಾಬುಸಾಬ್, ಪ್ರಧಾನ ಕಾರ್ಯದರ್ಶಿ ನಿರಂಜನ್, ಎನ್. ವರ್ತೇಶ್, ಜಿ.ಆರ್. ಗೋಪಾಲಕೃಷ್ಣ, ಆಸೀಫ್ ಭಾಷಾ , ಡಿ.ಈ. ಮಧುಸೂದನ್, ರವೀಂದ್ರ ಬಲ್ಲಾಳ್, ಹಸನಬ್ಬ ಬ್ಯಾರಿ, ಆರ್.ಡಿ. ಶೀಲಾ, ತ.ಮ. ನರಸಿಂಹ, ಶ್ರೀನಿವಾಸ್ ಆಚಾರ್, ಫ್ಯಾನ್ಸಿ ರಮೇಶ್, ಚಿಗುರು ಶ್ರೀಧರ್, ಹಬೀಬ್ ಸಾಬ್, ಅರುಣ್ ಮಲ್ಲಾಪುರ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಸಂಘಟನೆಯ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಅಪಾರ ಸಂಖ್ಯೆಯ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.