Headlines

ಮಹಿಳೆ ಮಾತೃರೂಪಿಣಿ , ಶಕ್ತಿರೂಪಿಣಿ – ಮಾಜಿ ಸಿಎಂ ಯಡಿಯೂರಪ್ಪ

ಮಹಿಳೆ ಮಾತೃರೂಪಿಣಿ , ಶಕ್ತಿರೂಪಿಣಿ – ಮಾಜಿ ಸಿಎಂ ಯಡಿಯೂರಪ್ಪ

ಶಿವಮೊಗ್ಗ : ಮಹಿಳೆಯರನ್ನು ಗೌರವದಿಂದ ಕಾಣುವುದು ಈ ನೆಲದ ಸಂಸ್ಕೃತಿ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆ ಪೂಜನೀಯಳು ಹಾಗೂ ಮಾತೃರೂಪಿಣಿ , ಶಕ್ತಿರೂಪಿಣಿ  ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಶನಿವಾರ ಆದಿಚುಂಚನಗಿರಿ ಸಮುದಾಯ ಭವನದಲ್ಲಿ  ಶಾಶತಿ ಮಹಿಳಾ ವೇದಿಕೆಯಿಂದ ಆಯೋಜಿಸಿದ್ದ ರಾಜ್ಯೋತ್ಸವ, ವಾರ್ಷಿಕೋತ್ಸವ, ಗರ್ಭಿಣಿಯರಿಗೆ ಸೀಮ೦ತ ಕಾರ್ಯಕ್ರಮ  ಉದ್ಘಾಟಿಸಿ,  ಸನ್ಮಾನ ಸ್ವೀಕರಿಸಿ ಮಾತನಾಡಿ ಸಮಾಜದಲ್ಲಿ ಹೆಣ್ನಿಗೆ ಇರುವಷ್ಟು ಹೆಸರು ಇನ್ನಾರಿಗೂ ಇಲ್ಲ. ತಾಯಂದಿರು ಮಕ್ಕಳನ್ನು ಸಮಾಜಕ್ಕೆ ಆಸ್ತಿಯಾಗಿ ಮಾಡಬೇಕು, ಅವರಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಹಾದಿತಪ್ಪದಂತೆ ಮಾಡಬೇಕು. ತಾಯಿಯಂದಿರಿಗಾಗಿ ಸಾಕಷ್ಟು ಯೋಜನೆಯನ್ನು ಸರಕಾರಗಳು ರೂಪಿಸಿವೆ. ಅವುಗಳ ಲಾಭ ಪಡೆಯಬೇಕೆಂದು ಕರೆ ನೀಡಿದರು.

ಸಂಸದ ಬಿ ವೈ ರಾಘವೇಂದ್ರ ಮಾತನಾಡಿ,  ಸ್ತ್ರೀಯನ್ನು ನಮ್ಮ ಸಂಸ್ಕೃತಿಯಲ್ಲಿ ಮಾತೆ ಎನ್ನುತ್ತೇವೆ. ಶಕ್ತಿರೂಪಿಣಿಯಾಗಿ ಕಾಣುತ್ತೇವೆ. ಸ್ತ್ರೀ ಶಕ್ತಿಯೇ ನಮ್ಮ ನಾಗರಿಕತೆಯ ಆಧಾರ. ಮಹಿಳೆಯರ ಸಬಲೀಕರಣಕ್ಕೆ ಭಾಗ್ಯಲಕ್ಷ್ಮಿ ಸೇರಿದ೦ತೆ ಹಲವು ಯೋಜನೆ ನೀಡಲಾಗಿದೆ. ಪ್ರಧಾನಿ ಮೋದಿ ಸಹ ಭೇಟಿ ಬಚಾವೊ, ಬೇಡಿ ಪಡಾವೋ ಯೋಜನೆ ಜಾರಿತಂದಿದ್ದಾರೆ. ಶಾಶ್ವತಿ ಮಹಿಳಾ ವೇದಿಕೆಯು ಮಹಿಳೆಯರ ಸಂಘಟನೆಯ ಮೂಲಕ ಹೆಚ್ಚಿನ ಅರಿವನ್ನು ಮೂಡಿಸಬೇಕು ಎಂದರು.

ಹೆಣ್ಣು ಮಂಗಳದ ಸಂಕೇತ. ಶಿವನ ಆದಿಯಾಗಿ ಎಲ್ಲರನ್ನು ತೆಗೆದು ಕೊಂಡು ಹೋಗುವವಳು ತಾಯಿ. ಹೆಣ್ಣು ನಾನು ಕೂಡಾ ಸಬಲೆ ಎಂದು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುವ ಮೂಲಕ ತೋರಿಸಿದ್ದಾಳೆ. ಕ್ರಿಕೆಟ್ ವಿಶ್ವಕಪ್ ಗೆದ್ದಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿರಲಿ ಎಂದರು.

ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ ತಾಯ್ತನ ಗೌರವಿಸುವುದು ನಮ್ಮ ಸಂಸ್ಕೃತಿಯ ಬಿಂಬ. ಮಹಿಳೆಗೆ ಗೌರವ ಕೊಟ್ಟರೆ ನಮ್ಮನ್ನು ನಾವೇ ಗೌರವಿಸಿಕೊಡಂತೆ. ಮನೆಯಲ್ಲಿ ಸ್ತ್ರೀಯನ್ನು ಅಮ್ಮ, ಅಕ್ಕ, ತಾಯಿ, ಹೆಂಡತಿ ರೂಪದಲ್ಲಿ ಕಾಣುತ್ತೇವೆ. ಹೊರಗಡೆ ಸ್ತ್ರೀಯನ್ನು ಸಹೋದರಿಯರಂತೆ ಕಾಣುತ್ತೇವೆ. ಈ ಪರಂಪರೆ ಇನ್ನೆಲ್ಲೂ ಇಲ್ಲ ಎಂದರು.

ಈ ಸಂದರ್ಭದಲ್ಲಿ ೬೦ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸೀಮಂತ ಮಾಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.ಆದಿಚುಂಚನಗಿರಿ ಮಠದ ನಾದಮಯಾನಂದ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ನಾರಿ ಶಕ್ತಿ ದೊಡ್ಡದು. ನಮ್ಮ ನೆಲದ ಪರಂಪರೆಯನ್ನು ಆಕೆ ಮುಂದುವರೆಸಿಕೊಂಡು ಬರುತ್ತಿದ್ದಾಳೆ. ಮಕ್ಕಳನ್ನು ಹೆತ್ತು, ಹೊತ್ತು ಶಿಕ್ಷಣ ಕೊಡಿಸಿ, ಜವಾಬ್ದಾರಿ ಮೂಡಿಸುತ್ತ ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ರೂಪಿಸುತ್ತಿದ್ದಾಳೆ. ಅಂತಹ ಸ್ತ್ರೀಗೆ ಸಮಾಜದಲ್ಲಿ ಎಲ್ಲೆಡೆ ಗೌರವ ಸಿಗಬೇಕು ಎಂದರು.

ಯಡಿಯೂರಪ್ಪ ಅವರನ್ನು ವೇದಿಕೆ ವತಿಯಿಂದ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷೆ ಶಾಂತಾ ಸುರೇಂದ್ರ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಎಸ್ ಎಸ್ ಜ್ಯೋತಿಪ್ರಕಾಶ್, ಎಚ್ ಎಸ್ ಸುಂದರೇಶ್, ರಾಮಕೃಷ್ಣ ವಿದ್ಯಾಸಂಸ್ಥೆಯ ಶೋಭಾ ವೆಂಕಟರಮಣ  ಮಹಿಳಾ ವೇದಿಕೆಯ ಪದಾಧಿಕಾರಿಗಳು ಹಾಜರಿದ್ದರು.