ವಿಮಾನ ಟಿಕೆಟ್ ಬುಕ್ ಮಾಡಿಸುವ ನೆಪದಲ್ಲಿ ₹11.09 ಲಕ್ಷ ವಂಚನೆ | ಶಿವಮೊಗ್ಗದಲ್ಲಿ ಸೈಬರ್ ವಂಚನೆ ಜಾಲ ಬಯಲು
A Shivamogga resident was allegedly cheated of ₹11.09 lakh by fraudsters posing as airline ticket booking agents. A case has been registered at the CEN Police Station.
ಶಿವಮೊಗ್ಗ: ವಿಮಾನ ಟಿಕೆಟ್ ಕಾಯ್ದಿರಿಸಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹11.09 ಲಕ್ಷ ಹಣ ವಂಚಿಸಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಶಿವಮೊಗ್ಗ ನಗರದ ಸಿ.ಇ.ಎನ್ (ಸೈಬರ್, ಆರ್ಥಿಕ ಮತ್ತು ಮಾದಕ ಅಪರಾಧ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ದೂರಿನ ಪ್ರಕಾರ, ಆರೋಪಿಗಳು ತಮ್ಮನ್ನು “ಶ್ರೀ ಭಾಗ್ಯವಂತಿ ಮಲ್ಟಿ ಬಿಸಿನೆಸ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್” ಕಂಪನಿಯ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡು, ತಮ್ಮ ಸಂಸ್ಥೆಯ ಮೂಲಕ ಸುಲಭವಾಗಿ ವಿಮಾನ ಟಿಕೆಟ್ ಕಾಯ್ದಿರಿಸಬಹುದು ಎಂದು ನಂಬಿಸಿದ್ದರು.
ನಂತರ ದೂರುದಾರರಿಂದ ವೈಯಕ್ತಿಕ ಮಾಹಿತಿ ಪಡೆದು, ನೋಂದಣಿ ಶುಲ್ಕದ ಹೆಸರಿನಲ್ಲಿ ಮೊದಲಿಗೆ ₹59,000 ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಬಳಿಕ ವಿವಿಧ ಕಾರಣಗಳನ್ನು ನೀಡಿ ಹಂತ ಹಂತವಾಗಿ ಹಣ ಪಾವತಿಸುವಂತೆ ಹೇಳಿ, ದೂರುದಾರರು, ಅವರ ಪತ್ನಿ ಹಾಗೂ ಮಗನ ಬ್ಯಾಂಕ್ ಖಾತೆಗಳಿಂದ ಒಟ್ಟು ₹11,09,000 ಅನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ.
ಇಷ್ಟೊಂದು ಹಣ ಪಡೆದಿದ್ದರೂ ಆರೋಪಿಗಳು ಯಾವುದೇ ವಿಮಾನ ಟಿಕೆಟ್ ಕಾಯ್ದಿರಿಸಿಕೊಡದೇ ವಂಚಿಸಿದ್ದಾರೆ ಎನ್ನಲಾಗಿದೆ. ಬಳಿಕ ದೂರುದಾರರು ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ, ಇನ್ನೂ ₹4 ಲಕ್ಷ ಪಾವತಿಸಿದರೆ ಮಾತ್ರ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದು ಹೇಳಿ ಮತ್ತಷ್ಟು ಹಣ ವಸೂಲಿ ಮಾಡಲು ಯತ್ನಿಸಿದ್ದಾರೆ.
ಈವರೆಗೆ ಹಣವನ್ನೂ ಹಿಂತಿರುಗಿಸದೇ, ಟಿಕೆಟ್‌ಗಳನ್ನೂ ನೀಡದೇ ಮೋಸ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.