ಶಿವಮೊಗ್ಗ ಕಾಂಗ್ರೆಸ್ ಕಚೇರಿ ಸುತ್ತ ಪೊಲೀಸ್ ಸರ್ಪಗಾವಲು; ರಸ್ತೆ ಬಂದ್ | Police tighten security at Shivamogga Congress office following posters appearing at BJP office and BY Vijayendra’s residence. Indira Gandhi Road barricaded and vehicle movement restricted.
ಶಿವಮೊಗ್ಗ: ಬಿಜೆಪಿ ಕಚೇರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಿವಾಸದ ಗೋಡೆಗಳ ಮೇಲೆ ಪೋಸ್ಟರ್ಗಳನ್ನು ಅಂಟಿಸಿದ ಪ್ರಕರಣದ ಬೆನ್ನಲ್ಲೇ ಶಿವಮೊಗ್ಗದ ಕಾಂಗ್ರೆಸ್ ಕಚೇರಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿ ಹಾಗೂ ಬೈಪಾಸ್ ರಸ್ತೆಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಿವಾಸದ ಗೋಡೆಗಳ ಮೇಲೆ ಯುವ ಕಾಂಗ್ರೆಸ್ ಸಮಿತಿ ಹೆಸರಿನಲ್ಲಿ ಪೋಸ್ಟರ್ಗಳನ್ನು ಅಂಟಿಸಲಾಗಿತ್ತು. ರಾತ್ರೋರಾತ್ರಿ ಕಾಣಿಸಿಕೊಂಡಿದ್ದ ಈ ಪೋಸ್ಟರ್ಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದವು.
ಇದೇ ಮಾದರಿಯ ಪೋಸ್ಟರ್ಗಳು ಬೆಂಗಳೂರಿನ ವಿವಿಧೆಡೆಗಳಲ್ಲಿಯೂ ಕಾಣಿಸಿಕೊಂಡಿದ್ದವು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಶಿವಮೊಗ್ಗದ ಕಾಂಗ್ರೆಸ್ ಕಚೇರಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಕಾಂಗ್ರೆಸ್ ಕಚೇರಿ ಇರುವ ಇಂದಿರಾಗಾಂಧಿ ರಸ್ತೆಯಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಕಚೇರಿಯಿಂದ ಸ್ವಲ್ಪ ದೂರದವರೆಗೆ ಬ್ಯಾರಿಕೇಡ್ ಹಾಕಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರಸ್ತೆಯಲ್ಲಿ ವಾಹನ ಸಂಚಾರವನ್ನೂ ನಿರ್ಬಂಧಿಸಲಾಗಿದೆ.
ಪೋಸ್ಟರ್ ವಿವಾದದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
