ಜೆಜೆಎಂ ನೀರು ಸರಬರಾಜಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ: ಮೋಟಾರ್ ರೂಮ್‌ಗೆ ಬೀಗ ಜಡಿದು ಬಡೇನಕೊಪ್ಪ ಗ್ರಾಮಸ್ಥರ ಆಕ್ರೋಶ! | Residents of Badenakoppa village in Hosanagara taluk, Shivamogga locked the JJM water tank motor room in protest against PWD officials’ negligence and severe drinking water scarcity
ಹೊಸನಗರ: ಹಳ್ಳಿಹಳ್ಳಿಗೂ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷೆಯ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆ ಜಾರಿಗೆ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ರಾಜಕೀಯ ಹಸ್ತಕ್ಷೇಪದಿಂದಾಗಿ ತಾಲೂಕಿನ ಬಡೇನಕೊಪ್ಪ ಗ್ರಾಮದಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ. ಗ್ರಾಮಕ್ಕೆ ನೀರು ಸರಬರಾಜು ಮಾಡಲು ವಿಳಂಬ ಧೋರಣೆ ಅನುಸರಿಸುತ್ತಿರುವ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ಗ್ರಾಮಸ್ಥರು, ನೀರಿನ ಟ್ಯಾಂಕ್‌ನ ಮೋಟಾರ್ ರೂಮ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.


ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಚ್ಚಿಗೆಬೈಲು ಮಜರೆ ವ್ಯಾಪ್ತಿಯ ಬಡೇನಕೊಪ್ಪ ಗ್ರಾಮದ ಜನರು ಈ ಬರಗಾಲದ ಸಂದರ್ಭದಲ್ಲಿ ಹನಿ ನೀರಿಗೂ ಪರಿತಪಿಸುವಂತಾಗಿದೆ. ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ಶೇಕಡಾ 90 ರಷ್ಟು ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಕೇವಲ ಒಂದು ದಿನದ ಕೆಲಸ ಮಾತ್ರ ಬಾಕಿ ಉಳಿದಿದೆ. ಆದರೆ, ಕಳೆದ ಎರಡು ವರ್ಷಗಳಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇಂದು-ನಾಳೆ ಎಂದು ಸಬೂಬು ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂಬುದು ಸ್ಥಳೀಯರ ಪ್ರಮುಖ ಆರೋಪವಾಗಿದೆ.
ವಿಪರ್ಯಾಸವೆಂದರೆ, ಬಡೇನಕೊಪ್ಪ ಗ್ರಾಮದಲ್ಲಿಯೇ ಕೊಳವೆಬಾವಿ (ಬೋರ್‌ವೆಲ್) ಕೊರೆಸಿ, ಬೃಹತ್ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಆದರೆ, ಮೂಲ ಸೌಕರ್ಯವಿರುವ ಬಡೇನಕೊಪ್ಪ ಗ್ರಾಮಕ್ಕೆ ನೀರು ನೀಡದೆ, ಪಕ್ಕದ ಗ್ರಾಮಗಳಾದ ಸೋಗೋಡು ಹಾಗೂ ಮಾರುತಿಪುರಕ್ಕೆ ಇಲ್ಲಿಂದಲೇ ನೀರು ಸರಬರಾಜು ಮಾಡಲಾಗುತ್ತಿದೆ. ಸ್ಥಳೀಯ ಗ್ರಾಮಸ್ಥರನ್ನು ಕಡೆಗಣಿಸಿ ಬೇರೆ ಗ್ರಾಮಗಳಿಗೆ ನೀರು ನೀಡುತ್ತಿರುವುದು ಸಂಪೂರ್ಣ ರಾಜಕೀಯ ಪ್ರೇರಿತ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮೂರಿನ ಸಂಪನ್ಮೂಲ ಬಳಸಿಕೊಂಡು ನಮಗೇ ನೀರು ಕೊಡದಿರುವುದು ಯಾವ ನ್ಯಾಯ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಅಧಿಕಾರಿಗಳ ಈ ಮಲತಾಯಿ ಧೋರಣೆಯನ್ನು ಖಂಡಿಸಿ ಗ್ರಾಮಸ್ಥರು ಒಗ್ಗಟ್ಟಾಗಿ ಮೋಟಾರ್ ರೂಮ್‌ಗೆ ಬೀಗ ಹಾಕಿ ತಕ್ಷಣವೇ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿದ್ದಾರೆ. ಒಂದು ವೇಳೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಬಡೇನಕೊಪ್ಪ ಗ್ರಾಮಕ್ಕೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸದಿದ್ದರೆ, ಮುಂಬರುವ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿಯಲಾಗುವುದು ಎಂದು ಗ್ರಾಮಸ್ಥರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಕೂಡಲೇ ಮೇಲಧಿಕಾರಿಗಳು ಮಧ್ಯಪ್ರವೇಶಿಸಿ ಗ್ರಾಮದ ನೀರಿನ ಬವಣೆಯನ್ನು ನೀಗಿಸಬೇಕಿದೆ.
ಈ ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಅವಿನಾಶ ಕಡಳ್ಳಿ, ಕುಮಾರ ಕಡಳ್ಳಿ, ನಾಗೇಶ ಒಡ್ಡಿಮನೆ, ರಾಘವೇಂದ್ರ ಒಡ್ಡಿಮನೆ, ಧರ್ಮ ಹೊಸಕ್ಲು, ಶೇಷಪ್ಪ ಒಡ್ಡಿಮನೆ, ಯೋಗೇಂದ್ರ ಒಡ್ಡಿಮನೆ, ಧರ್ಮ ಕಡಳ್ಳಿ, ಮಂಜಪ್ಪ ಕಡಳ್ಳಿ, ಸೀತಾರಾಮ್ ಒಡ್ಡಿಮನೆ, ಪವಿತ್ರ ಕಡಳ್ಳಿ, ಸುಮನ್, ದೇವೇಂದ್ರ ಹೊಸಕ್ಲು, ಕೇಶವ ಹೊಸಕ್ಲು, ಮಹೇಶ್ ಒಡ್ಡಿಮನೆ, ಸುಮಿತ್ರ ಒಡ್ಡಿಮನೆ, ವೇದ ಕಡಳ್ಳಿ, ಲಲಿತಾ ಕಡಳ್ಳಿ, ಲಲಿತಾ ಒಡ್ಡಿಮನೆ, ಸರೋಜ, ರೋಹಿತ ಒಡ್ಡಿಮನೆ, ರಾಘವೇಂದ್ರ ಹೊಸಕ್ಲು, ನಾಗರತ್ನ ಪೂಜಾರಿ, ಸೃಜನ್ ಪೂಜಾರಿ, ಯತೀಶ್ ಹೊಸಕ್ಲು ಹಾಗೂ ರಮೇಶ ಕಡಳ್ಳಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
