ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ಮರಳುತ್ತಿದ್ದ ವ್ಯಕ್ತಿ ಕಾರು ಅಪಘಾತದಲ್ಲಿ ಸಾವು | ರಸ್ತೆಯಲ್ಲೇ ಕಾದಿತ್ತು ವಿಧಿಯಾಟ!

ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮನೆಗೆ ಮರಳುತ್ತಿದ್ದ ವ್ಯಕ್ತಿ ರಸ್ತೆ ಅಪಘಾತದಲ್ಲಿ ಸಾವು | ರಸ್ತೆಯಲ್ಲೇ ಕಾದಿತ್ತು ವಿಧಿಯಾಟ!

A 65-year-old retired BSNL employee from Davanagere died on the spot after the car he was travelling in lost control and crashed into a roadside culvert near Hosuru Darga on the Ayanur–Sirigere road in Shivamogga.

ಶಿವಮೊಗ್ಗ: ಚಿಕಿತ್ಸೆ ಪಡೆದು ಮನೆಗೆ ಮರಳುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಾವಣಗೆರೆ ಮೂಲದ ಬಿಎಸ್‌ಎನ್‌ಎಲ್‌ನ ನಿವೃತ್ತ ನೌಕರರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಶಿವಮೊಗ್ಗ ತಾಲೂಕಿನ ಆಯನೂರು–ಸಿರಿಗೆರೆ ರಸ್ತೆಯ ಹೊಸೂರು ದರ್ಗಾ ಸಮೀಪ ನಡೆದಿದೆ.

ಮೃತರನ್ನು ದಾವಣಗೆರೆ ನಿವಾಸಿ ಸುರೇಶ್ (65) ಎಂದು ಗುರುತಿಸಲಾಗಿದೆ.

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಮ್ಮ ಪುತ್ರನೊಂದಿಗೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ದಾವಣಗೆರೆಗೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಕಾರನ್ನು ಅವರ ಪುತ್ರ ಚಾಲನೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಆಯನೂರು–ಸಿರಿಗೆರೆ ರಸ್ತೆಯ ಹೊಸೂರು ದರ್ಗಾ ಸಮೀಪ ತಲುಪುತ್ತಿದ್ದಂತೆ ಕಾರಿನ ಮೇಲಿನ ನಿಯಂತ್ರಣ ಏಕಾಏಕಿ ತಪ್ಪಿ, ರಸ್ತೆ ಬದಿಯಲ್ಲಿದ್ದ ಮೋರಿಗೆ ಕಾರು ಅತಿವೇಗದಲ್ಲಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನಕ್ಕೆ ಭಾರೀ ಹಾನಿಯಾಗಿದೆ.

ಅಪಘಾತದ ತೀವ್ರತೆಗೆ ಸುರೇಶ್ ಅವರಿಗೆ ಗಂಭೀರ ಗಾಯಗಳಾಗಿ, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದು, ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

About The Author