Headlines

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಎನ್ನುವ ಸುಳ್ಳು ಪ್ರಚಾರ: ವಿದ್ಯಾರ್ಥಿಗಳ ಆತಂಕಕ್ಕೆ ತೆರೆ ಹಾಕಿದ ಮಂಡಳಿ

Social media posts claiming to sell Second PUC question papers for money have created panic among students and parents in Karnataka. The examination board has clarified that there is no question paper leak and warned against online fraud.

ಬೆಂಗಳೂರು, ಫೆ.26: ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವವರ ವಿರುದ್ಧ ನಿರ್ದಾಕ್ಷ್ಯಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರೂ, ಮತ್ತೆ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಬೇಕೇ? ಎಂದು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ಗಳು ಹರಿದಾಡುತ್ತಿರುವುದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

100 ರೂಪಾಯಿ ಕೊಟ್ಟರೆ ಸಾಕು ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ನೀಡುವುದಾಗಿ ಹೇಳುವ ವಿಡಿಯೋ ಸಹಿತ ಪೋಸ್ಟ್‌ಗಳನ್ನು ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ‘ಡೆಲ್ಟಾ ಕನ್ನಡಿಗ’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, ಯಾವುದಾದರೂ ಪ್ರಶ್ನೆ ಪತ್ರಿಕೆ ಬೇಕಿದ್ದರೆ ಮೆಸೇಜ್ ಮಾಡಿ, ಮೊತ್ತವನ್ನು ನಂತರ ತಿಳಿಸುತ್ತೇನೆ ಎಂದು ಕಿಡಿಗೇಡಿಯೊಬ್ಬ ಬರೆದುಕೊಂಡಿರುವುದು ಗಮನ ಸೆಳೆದಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ ಅವರು, “ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. ಶಿಕ್ಷಣ ಇಲಾಖೆಗೆ ಯಾವುದೇ ಭಯವಿಲ್ಲ. ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಸೋರಿಕೆ ಸುದ್ದಿ ಸಂಪೂರ್ಣ ಸುಳ್ಳು” ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಪರೀಕ್ಷೆಯ ಸಮಯದಲ್ಲಿ ಹಣ ಮಾಡುವ ಉದ್ದೇಶದಿಂದ ಹಳೆಯ ಅಥವಾ ನಕಲಿ ಪ್ರಶ್ನೆ ಪತ್ರಿಕೆಗಳನ್ನು ನೀಡಿ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಸಾಧ್ಯತೆ ಹೆಚ್ಚಿದೆ. ಇಂತಹ ಜಾಲಗಳಿಗೆ ಸಿಲುಕಿಕೊಂಡು ಹಣ ಕಳೆದುಕೊಳ್ಳಬೇಡಿ, ನಿಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ವಿದ್ಯಾರ್ಥಿಗಳಿಗೆ ಗೊಂದಲ ಮೂಡಿಸುತ್ತಿರುವ ಸಾಮಾಜಿಕ ಜಾಲತಾಣ ಖಾತೆಗಳ ಪರಿಶೀಲನೆಗೆ ಪರೀಕ್ಷಾ ಮಂಡಳಿ ಮುಂದಾಗಿದ್ದು, ಸಂಬಂಧಿತ ಕಿಡಿಗೇಡಿಗಳ ವಿರುದ್ಧ ಸೈಬರ್ ಪೊಲೀಸರಿಗೆ ದೂರು ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಫೆ. 28ರಿಂದ ಮಾ. 17ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ–1 ನಡೆಯಲಿದೆ. ಈ ಬಾರಿ ಒಟ್ಟು 7,10,363 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, 1,217 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರತಿ ಕೇಂದ್ರದಲ್ಲೂ ವೆಬ್‌ಕಾಸ್ಟಿಂಗ್ ಕಡ್ಡಾಯ ಮಾಡಲಾಗಿದೆ.

ಇದಕ್ಕೂ ಮುನ್ನ, ಶಿವಮೊಗ್ಗದಲ್ಲಿ ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆಯ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಪ್ರಕರಣ ಅಧಿಕಾರಿಗಳಿಗೆ ದೊಡ್ಡ ಆಘಾತ ನೀಡಿತ್ತು. ಪರೀಕ್ಷೆ ಆರಂಭಕ್ಕೂ ಮೊದಲು ವಾಟ್ಸಾಪ್ ಮೂಲಕ ಪ್ರಶ್ನೆ ಪತ್ರಿಕೆ ಹರಿದಾಡಿದ್ದದ್ದು ಪತ್ತೆಯಾಗಿತ್ತು. ಶಿವಮೊಗ್ಗ ಜಿಲ್ಲೆಯ ಕೋಡ್ ಹೊಂದಿದ್ದ ಪ್ರಶ್ನೆ ಪತ್ರಿಕೆ ತುಮಕೂರು ಜಿಲ್ಲೆಯಲ್ಲೂ ಚಲಾವಣೆಯಲ್ಲಿದ್ದದ್ದು ಕಂಡುಬಂದಿದ್ದು, ಹಿರಿಯ ಅಧಿಕಾರಿಗಳ ಸೂಚನೆಯಂತೆ ಕೋಟೆ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದೆ.

About The Author