ಖಾಕಿಯೊಳಗಿನ ಮಾನವೀಯತೆ – ಇದು ರಿಪ್ಪನ್‌ಪೇಟೆ ಪೊಲೀಸ್ ಸ್ಟೋರಿ |help desk
ರಿಪ್ಪನ್‌ಪೇಟೆ : ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಇಬ್ಬರು ಪುಟ್ಟ ಮಕ್ಕಳ ಬಡ ಕುಟುಂಬದ ನೋವಿಗೆ ಪಟ್ಟಣದ ಖಾಕಿಗಳು ಹೆಗಲು ಕೊಟ್ಟಿದ್ದಾರೆ.
ಪಟ್ಟಣದ ಬರುವೆ ಗ್ರಾಮದ ನಿವಾಸಿಗಳಾದ ರಾಮು ಎಂಬಾತನ ಮೂರು ವರ್ಷದ ದರ್ಶನ್ ಹಾಗೂ ಬರುವೆ ಗ್ರಾಮದ ಶೇಖರಪ್ಪ ರವರ ಹನ್ನೆರಡು ವರ್ಷದ ವಿನೋದ್ ಗೆ ಹುಟ್ಟಿನಿಂದಲೇ ಹೃದಯ ಸಂಬಂಧಿ ಖಾಯಿಲೆಯಿದ್ದು ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ತೋರಿಸಿ ತಕ್ಕಮಟ್ಟಿಗೆ ಚಿಕಿತ್ಸೆ ಕೊಡಿಸಿಕೊಂಡು ಬಂದಿದ್ದಾರೆ ಆದರೆ ಈಗ ಮಗುವಿಗೆ ಕೂಡಲೇ ಆಪರೇಷನ್ ಅಗತ್ಯವಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಆದರೆ ಬಡ ಕುಟುಂಬಕ್ಕೆ ಅಷ್ಟು ಆರ್ಥಿಕ ಶಕ್ತಿ ಇಲ್ಲದೇ ಇರುವುದರಿಂದ ದೇವರ ಮೇಲೆ ಭಾರ ಹಾಕಿ ಕೈ ಚೆಲ್ಲಿ ಕುಳಿತು ಬಿಟ್ಟಿದ್ದರು.
ಇತ್ತೀಚೆಗೆ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ರವರಿಗೆ ವಾರ್ಡ್ ವಾರು ಸಾರ್ವಜನಿಕರ ಮೀಟಿಂಗ್ ಮಾಡುವಾಗ ಈ ವಿಷಯ ತಿಳಿದಿದೆ ಕೂಡಲೇ ಪೋಷಕರನ್ನು ತರಾಟೆಗೆ ತೆಗೆದುಕೊಂಡು ಕೈ ಚೆಲ್ಲಿ ಕೂರದೇ ಚಿಕಿತ್ಸೆ ಮುಂದುವರೆಸಿ ನನ್ನ ಕೈಲಾದ ಆರ್ಥಿಕ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು.
ಬಡ ಮಕ್ಕಳ ಬಗ್ಗೆ ಡಿವೈಎಸ್ಪಿ ಗಜಾನನ ವಾಮನ ಸುತಾರ ,ಮತ್ತು ಸಿಪಿಐ ಗುರಣ್ಣ ಹೆಬ್ಬಾಳ್ ರವರ ಗಮನಕ್ಕೆ ತಂದ ಪಿಎಸ್ ಐ ಪ್ರವೀಣ್ ಠಾಣೆಯ ಎಲ್ಲಾ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ಸಹಕಾರದಿಂದ ಇಂದು ಬರುವೆ ಗ್ರಾಮದ ಅಂಗನವಾಡಿಗೆ ತೆರಳಿ ಎರಡು ಕುಟುಂಬಸ್ಥರನ್ನು ಕರೆಸಿ ಧನಸಹಾಯ ಮಾಡುವುದರೊಂದಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.
ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕವಾಗಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ಈ ಸಂಧರ್ಭದಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಎ ಎಸ್ ಐ ಹಾಲಪ್ಪ , ಸಿಬ್ಬಂದಿಗಳಾದ ಉಮೇಶ್ , ಸಂತೋಷ್ , ಚೆನ್ನಪ್ಪ , ಮಧುಸೂಧನ್ , ಮಂಜುನಾಥ್ , ಸೋಮಶೇಖರ್ ಹಾಗೂ ಗ್ರಾಪಂ ಸದಸ್ಯರಾದ ಆಸೀಫ಼್, ನಿರೂಪ್ ಕುಮಾರ್ ಇದ್ದರು.
ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವ ಎರಡು ಮಕ್ಕಳ ಜವಬ್ದಾರಿಯನ್ನು ಪೋಸ್ಟ್ ನ್ಯೂಸ್ ಬಳಗ ವಹಿಸಿಕೊಂಡಿದ್ದು ಪಿಎಸ್‌ಐ ಪ್ರವೀಣ್ ಎಸ್ ಪಿ ರವರ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಬೇಕಾದ ಎಲ್ಲಾ ರೀತಿಯ ಚಿಕಿತ್ಸೆಯನ್ನು ಕೊಡಿಸುವ ಜವಬ್ದಾರಿಯನ್ನು ಸಹೃದಯ ದಾನಿಗಳ ನೆರವಿನಿಂದ ವಹಿಸಿಕೊಂಡಿದ್ದೇವೆ.ಈ ನಮ್ಮ ಕಾರ್ಯಕ್ಕೆ ಗ್ರಾಪಂ ಸದಸ್ಯರಾದ ಆಸೀಫ಼್ ಭಾಷಾ ಹಾಗೂ ನಿರೂಪ್ ಕುಮಾರ್ ಕೈ ಜೋಡಿಸಿದ್ದಾರೆ.
ಮಕ್ಕಳ ಪೋಷಕರ ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇರುವುದರಿಂದ ಇನ್ನೆರಡು ದಿನಗಳಲ್ಲಿ ಯುಪಿಐ ಸ್ಕ್ಯಾನರ್ ಹಾಗೂ ಅಕೌಂಟ್ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ.