ಹೊಸನಗರ: 2008ರ ಕ್ಷೇತ್ರ ಮರುವಿಂಗಡಣೆಯಲ್ಲಿ ಹೊಸನಗರ ತನ್ನದೇ ಆದ ವಿಧಾನಸಭಾ ಕ್ಷೇತ್ರದ ಅಸ್ತಿತ್ವವನ್ನು ಕಳೆದುಕೊಂಡ ನಂತರ ತಾಲೂಕಿನಲ್ಲಿ ಸಮಗ್ರ ಅಭಿವೃದ್ಧಿ ಕುಂಠಿತಗೊಂಡಿದೆ ಎಂಬ ಆಕ್ರೋಶದ ಹಿನ್ನೆಲೆಯಲ್ಲಿ, ಕ್ಷೇತ್ರ ಮರುಸ್ಥಾಪನೆಗಾಗಿ ಇಂದು (ಫೆಬ್ರವರಿ 12) ಪಟ್ಟಣದ ಶ್ರೀ ಗಾಯತ್ರಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ.
ಬೆಳಗ್ಗೆ 10.30ಕ್ಕೆ ಆರಂಭವಾಗುವ ಈ ಸಭೆಯನ್ನು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳ ಸಾರಥ್ಯದಲ್ಲಿ ಪಕ್ಷಾತೀತ, ಧರ್ಮತೀತ ಹಾಗೂ ಜಾತ್ಯಾತೀತವಾಗಿ ಹಮ್ಮಿಕೊಳ್ಳಲಾಗಿದೆ.
2028ರ ಜನಗಣತಿ ಸಂದರ್ಭದಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಯಾಗಬೇಕು ಎಂಬ ಮುಖ್ಯ ಉದ್ದೇಶದೊಂದಿಗೆ ಈ ಸಭೆ ಆಯೋಜಿಸಲಾಗಿದೆ.
ಬುಧವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಕೃಷಿ ಉತ್ಪಾದನಾ ಸಂಘದ ಅಧ್ಯಕ್ಷ ಎನ್.ಆರ್. ದೇವಾನಂದ್, 2008ರ ಮರುವಿಂಗಡಣೆಯಲ್ಲಿ ಹೊಸನಗರ ತಾಲೂಕಿನ ಹೋಬಳಿಗಳನ್ನು ಸಾಗರ ಹಾಗೂ ತೀರ್ಥಹಳ್ಳಿ ಕ್ಷೇತ್ರಗಳಿಗೆ ಹಂಚಲಾಗಿದ್ದು, ಅಂದಿನಿಂದ ತಾಲೂಕಿನ ಅಭಿವೃದ್ಧಿ ಮರೀಚಿಕೆಯಾಗಿ ಉಳಿದಿದೆ ಎಂದರು. ಪಶ್ಚಿಮ ಘಟ್ಟ ಪ್ರದೇಶವಾಗಿರುವ ಕಾರಣ ಜನಸಂಖ್ಯೆ ಹೆಚ್ಚಳ ಕಡಿಮೆಯಿರಬಹುದು, ಆದರೆ ಇದು ಕ್ಷೇತ್ರ ಮಾನ್ಯತೆ ಕಳೆದುಕೊಳ್ಳಲು ಕಾರಣವಾಗಬಾರದು ಎಂದು ಅಭಿಪ್ರಾಯಪಟ್ಟರು.
ಕ್ಷೇತ್ರ ಮರುಸ್ಥಾಪನೆಗಾಗಿ ಶೀಘ್ರದಲ್ಲೇ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ ಅವರು, ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳ ನೇತೃತ್ವದಲ್ಲಿ ಹೊಸನಗರ ಪಟ್ಟಣದ ಕೇಂದ್ರ ಸ್ಥಾನದಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಜಾಗೃತಿ ಜಾಥಾ ನಡೆಸುವ ಸದುದ್ದೇಶವಿದೆ ಎಂದರು.
ಈ ಹೋರಾಟಕ್ಕೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಇದಕ್ಕೂ ಮೊದಲು ಹೊಸನಗರ ಕ್ಷೇತ್ರದ ಮಾಜಿ ಶಾಸಕ, 95 ವರ್ಷದ ಬಿ. ಸ್ವಾಮಿರಾವ್ ಅವರು ಕ್ಷೇತ್ರ ಮರುಸ್ಥಾಪನೆಗಾಗಿ ಹಲವಾರು ಬಾರಿ ಧ್ವನಿ ಎತ್ತಿದ್ದರು. ಇತ್ತೀಚೆಗೆ ಮೂಡುಗೊಪ್ಪ ನಗರ ಪಂಚಾಯತಿ ಸದಸ್ಯ ಕರುಣಾಕರ ಶೆಟ್ಟಿ ತಾಲೂಕಿನ 30 ಗ್ರಾಮ ಪಂಚಾಯತಿಗಳಿಗೆ ಸೈಕಲ್ ಜಾಥಾ ಮೂಲಕ ಭೇಟಿ ನೀಡಿ ಜಾಗೃತಿ ಮೂಡಿಸಿದ್ದರು.
ಈ ಹಿನ್ನಲೆಯಲ್ಲಿ ಇಂದು ನಡೆಯುವ ಪೂರ್ವಭಾವಿ ಸಭೆಗೆ ತಾಲೂಕಿನ ಎಲ್ಲಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತಿಗಳ ಮಾಜಿ ಜನಪ್ರತಿನಿಧಿಗಳು, ರೈತ ಸಂಘಟನೆಗಳು, ದಲಿತ ಸಮಿತಿಗಳು, ಹೋರಾಟಗಾರರು, ಮಹಿಳಾ ಸಂಘಗಳು, ಕಾಲೇಜು ಮಟ್ಟದ ವಿದ್ಯಾರ್ಥಿಗಳು ಸೇರಿದಂತೆ ಸಮಸ್ತ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಹಂಚಿಕೊಳ್ಳುವಂತೆ ದೇವಾನಂದ್ ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಲಗೋಡು ರತ್ನಾಕರ್, ಗಣಪತಿ ಬೆಳಗೋಡು, ಮೊಬೈಲ್ ಮುರಳಿ, ಸದಾಶಿವ ಶೆಟ್ಟಿ, ಚಿದಂಬರ ಹೂವಿನಕೋಣೆ, ಚಿಕ್ಕಮಣತಿ ಅವಿನಾಶ್, ಮುಂಬಾರು ಶೇಖರಪ್ಪ, ಎಂ.ಪಿ. ಸುರೇಶ್, ಜಯನಗರ ಗುರು, ಉಬೇದ್ ಸಾಬ್, ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.














