POSTMANNEWS

ನೈಜ ಸುದ್ದಿ ನೇರ ಬಿತ್ತರ..

ಹೊಸನಗರಕ್ಕೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಅವಶ್ಯ |ಹೋರಾಟದ ಪೂರ್ವಭಾವಿ ಸಭೆಯಲ್ಲಿ ಒಕ್ಕೊರಲ ಧ್ವನಿ

Demand for restoration of Hosanagar Assembly Constituency gains momentum as religious leaders, former ministers, MLAs and citizens unanimously call for a separate constituency to address submergence-affected issues and ensure development.

ಹೊಸನಗರ: ಮುಳುಗಡೆ ಸಂತ್ರಸ್ಥರಾದ ಹೊಸನಗರ ತಾಲೂಕಿನ ಜನರ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರತ್ಯೇಕ ವಿಧಾನಸಭಾ ಕ್ಷೇತ್ರ ರಚನೆಯೇ ಏಕೈಕ ಮಾರ್ಗ ಎಂದು ಮೂಲೆಗದ್ದೆ ಮಠದ ಅಭಿನವಚನ್ನಬಸವ ಸ್ವಾಮೀಜಿ ಹೇಳಿದರು.

ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗಾಗಿ ನಡೆಸಲಾಗುವ ಹೋರಾಟದ ಕುರಿತು ಚರ್ಚಿಸಲು ಗುರುವಾರ ಗಾಯಿತ್ರಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರ ರಚನೆಯಾದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲಿದೆ ಎಂದರು. ಈ ಹೋರಾಟ ಯಶಸ್ವಿಯಾಗಲು ಪ್ರತಿಯೊಬ್ಬರೂ ನಿಸ್ವಾರ್ಥವಾಗಿ ತೊಡಗಿಸಿಕೊಳ್ಳಬೇಕು. ಅಧಿಕಾರಿಗಳ ಗಮನ ಸೆಳೆಯುವಂತೆ ಹೋರಾಟ ಗಟ್ಟಿಯಾಗಬೇಕಿದ್ದು, ಯುವಜನತೆ, ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡವರು, ಸಮಾಜಸೇವಕರು ಹಾಗೂ ಪ್ರಮುಖರು ಪಕ್ಷಾತೀತವಾಗಿ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ಪ್ರಸ್ತುತ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ಸುಮಾರು 400 ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದು, ಕ್ಷೇತ್ರ ಪ್ರವಾಸವೇ ದುಸ್ತರವಾಗಿದೆ ಎಂದರು. ಭೌಗೋಳಿಕತೆ ಆಧಾರದ ಮೇಲೆ ಮೇಘಾಲಯ, ಅಸ್ಸಾಂ ಮೊದಲಾದ ರಾಜ್ಯಗಳಲ್ಲಿ ಕಡಿಮೆ ಜನಸಂಖ್ಯೆ ಇದ್ದರೂ ವಿಶೇಷ ಸಂದರ್ಭಗಳಲ್ಲಿ ವಿಧಾನಸಭಾ ಕ್ಷೇತ್ರ ರಚಿಸಿರುವ ಉದಾಹರಣೆಗಳಿವೆ. ಮುಳುಗಡೆ ಸಮಸ್ಯೆಯಿಂದ ಬಳಲುತ್ತಿರುವ ಹೊಸನಗರ ತಾಲೂಕಿಗೂ ಇದೇ ರೀತಿಯ ನ್ಯಾಯ ದೊರಕಬೇಕಿದ್ದು, ಕ್ಷೇತ್ರ ಪುನರ್‌ರಚನೆಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ ಹೊಸನಗರ ವಿಧಾನಸಭಾ ಕ್ಷೇತ್ರ ಮರು ಸ್ಥಾಪನೆ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದ್ದು ಈ ಬಗ್ಗೆ ನಾನು ಹಾಗೂ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಸದನದ ಗಮನಸೆಳೆಯುವಲ್ಲಿ ಪ್ರಯತ್ನಿಸುತ್ತೇವೆ ಎಂದರು.

ಮಾಜಿ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಹೋರಾಟ ಆರಂಭಿಸುವುದಕ್ಕಿಂತ ಅದನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗುವುದು ಮುಖ್ಯ ಎಂದು ಹೇಳಿದರು. ಇಂದು ಸಭೆ ನಡೆಸಿ ಬಳಿಕ ಎರಡು ವರ್ಷಗಳ ಬಳಿಕ ಮತ್ತೆ ಹೋರಾಟಕ್ಕೆ ಇಳಿದರೆ ಯಾವುದೇ ಪ್ರಯೋಜನವಿಲ್ಲ. ಈಗ ಆರಂಭಿಸಿರುವ ಹೋರಾಟವನ್ನು ಹೀಗೆಯೇ ಮುಂದುವರೆಸಲು ತನ್ನ ಸಂಪೂರ್ಣ ಬೆಂಬಲವಿದೆ ಎಂದರು.

ಈ ಸಂಧರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ , ಮಾಜಿ ಶಾಸಕರಾದ ಬಿ. ಸ್ವಾಮಿರಾವ್, ಡಾ. ಜಿ.ಡಿ. ನಾರಾಯಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಅವರುಗಳು ವಿಧಾನಸಭಾ ಕ್ಷೇತ್ರ ರಚನೆಯ ಅಗತ್ಯ ಮತ್ತು ಮಹತ್ವದ ಕುರಿತು ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಚಂದ್ರಪ್ಪ, ಪ್ರಮುಖರಾದ ಎನ್.ಆರ್. ದೇವಾನಂದ, ವರ್ತೇಶ್, ಬಿ.ಜಿ. ಚಂದ್ರಮೌಳಿ, ತಿ.ನಾ. ಶ್ರೀನಿವಾಸ್, ಚಿದಂಬರ, ಶ್ರೀಧರ್ ಉಡುಪ, ಶ್ರೀನಿವಾಸ್ ಕಾಮತ್ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಾಮಾಜಿಕ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಬಿ. ಚಿದಂಬರ್ ಸ್ವಾಗತಿಸಿದರು.

About The Author