w
Headlines
Home » ಅಕ್ರಮ ಆಸ್ತಿ ಆರೋಪ: ಬೆಸ್ಕಾಂ ಎಇಇ ಮನೆ–ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ | ರಿಪ್ಪನ್‌ಪೇಟೆಯಲ್ಲೂ ಪರಿಶೀಲನೆ

ಅಕ್ರಮ ಆಸ್ತಿ ಆರೋಪ: ಬೆಸ್ಕಾಂ ಎಇಇ ಮನೆ–ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ | ರಿಪ್ಪನ್‌ಪೇಟೆಯಲ್ಲೂ ಪರಿಶೀಲನೆ

IMG 20260212

Lokayukta officials conducted simultaneous raids on the houses, office and properties of BESCOM AEE R.H. Arjun in Davanagere and Shivamogga over allegations of disproportionate assets. Document verification is ongoing.

ಅಕ್ರಮ ಆಸ್ತಿ ಆರೋಪ: ಬೆಸ್ಕಾಂ ಎಇಇ ಮನೆ–ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ | ರಿಪ್ಪನ್‌ಪೇಟೆಯಲ್ಲೂ ಪರಿಶೀಲನೆ

ದಾವಣಗೆರೆ/ಶಿವಮೊಗ್ಗ: ಆದಾಯ ಮೀರಿದ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಬೆಸ್ಕಾಂ (BESCOM) ದಾವಣಗೆರೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಇಇ ಅರ್ಜುನ್‌ ಆರ್.ಎಚ್ ಅವರ ಮನೆ, ಕಚೇರಿ ಹಾಗೂ ಸಂಬಂಧಿತ ಆಸ್ತಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ (ಫೆ.12) ಬೆಳಂಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ದಾವಣಗೆರೆ ಮತ್ತು ಶಿವಮೊಗ್ಗ ಲೋಕಾಯುಕ್ತ ಪೊಲೀಸರು ಐದು ತಂಡಗಳಾಗಿ ಕಾರ್ಯಾಚರಣೆ ನಡೆಸಿದ್ದು, ಶಿವಮೊಗ್ಗದ ಗೋಪಾಳದ ಮನೆ ಹಾಗೂ ವಾಣಿಜ್ಯ ಸಂಕೀರ್ಣ, ದಾವಣಗೆರೆಯ ನಿಟ್ಟುವಳ್ಳಿ ಬಡಾವಣೆಯ ಬಾಡಿಗೆ ರೂಂ ಮತ್ತು ಬೆಸ್ಕಾಂ ಕಚೇರಿ, ರಿಪ್ಪನ್‌ಪೇಟೆ ಸಮೀಪದ ತಳಲೆ ಗ್ರಾಮದ ತೋಟದ ಮನೆ ಸೇರಿದಂತೆ ಹಲವು ಸ್ಥಳಗಳಲ್ಲಿ ಪರಿಶೀಲನೆ ನಡೆದಿದೆ. ಈ ಸಂಬಂಧ ಪಟ್ಟಣದ ಗ್ರಾಮ ಪಂಚಾಯತಿಗೂ ಅಧಿಕಾರಿಗಳು ಭೇಟಿ ನೀಡಿ ಕಛೇರಿಯನ್ನು ದಾಳಿ ಸಂಬಂಧಿತ ಕಾರ್ಯಕ್ಕೆ ಬಳಸಿದ ಬಗ್ಗೆಯೂ ವರದಿಯಾಗಿದೆ.

ತನಿಖೆಯ ಪ್ರಾಥಮಿಕ ಮಾಹಿತಿಯಂತೆ ಅರ್ಜುನ್‌ ಅವರ ಬಳಿ ಎರಡು ನಿವೇಶನಗಳು, ಮೂರು ಮನೆಗಳು ಹಾಗೂ ಇತ್ತೀಚೆಗೆ ಖರೀದಿಸಿದ ಸುಮಾರು ಎರಡು ಎಕರೆ ಕೃಷಿ ಭೂಮಿ ಪತ್ತೆಯಾಗಿದೆ. ಚಿನ್ನಾಭರಣವನ್ನು ಅಡವಿಟ್ಟು ಬ್ಯಾಂಕ್‌ಗಳಿಂದ ಸಾಲ ಪಡೆದಿರುವ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಶಿವಮೊಗ್ಗದ ಮನೆಯಲ್ಲಿ ಆಸ್ತಿ ಪತ್ರಗಳು ಸೇರಿದಂತೆ ಚಿನ್ನಾಭರಣ ಮತ್ತು ಬೆಳ್ಳಿ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದೇ ವೇಳೆ ವಿಜಯನಗರ ಮತ್ತು ಗೋಪಾಲಗೌಡ ಬಡಾವಣೆ, ಸಾಗರ ರಿಪ್ಪನ್‌ಪೇಟೆ ಸಮೀಪದ ತಳಲೆ ಗ್ರಾಮದಲ್ಲಿರುವ 2.5 ಎಕರೆ ಹಾಗೂ 4.5 ಎಕರೆ ಜಮೀನಿನ ಫಾರ್ಮ್‌ಹೌಸ್‌ಗಳ ಮೇಲೂ ದಾಳಿ ಮುಂದುವರಿದಿದೆ. ದಾವಣಗೆರೆಯ ನಿಟ್ಟುವಳ್ಳಿಯ ಬಾಡಿಗೆ ಮನೆ ಮತ್ತು ಕಚೇರಿಯಲ್ಲಿಯೂ ದಾಖಲೆ ಪರಿಶೀಲನೆ ನಡೆಯುತ್ತಿದೆ.

“ಅರ್ಜುನ್‌ ಅವರ ಬಳಿ ನಿವೇಶನ, ಮನೆ ಹಾಗೂ ಜಮೀನು ಪತ್ತೆಯಾಗಿದೆ. ನಗದು ಮತ್ತು ಚಿನ್ನಾಭರಣ ಸಿಕ್ಕಿಲ್ಲ. ದಾಖಲೆಗಳ ಪರಿಶೀಲನೆ ಇನ್ನೂ ಪೂರ್ಣಗೊಂಡಿಲ್ಲ,” ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಕೌಲಾಪುರೆ ಮಾಹಿತಿ ನೀಡಿದ್ದಾರೆ.

ಲೋಕಾಯುಕ್ತ ಡಿವೈಎಸ್‌ಪಿ ಚಂದ್ರಶೇಖರ್‌, ಇನ್ಸ್‌ಪೆಕ್ಟರ್‌ಗಳಾದ ಪ್ರಭು ಸೂರೇನ್‌ ಮತ್ತು ಗುರುರಾಜ್‌ ಮೈಲಾರಿ ನೇತೃತ್ವದ ತಂಡಗಳು ಪರಿಶೀಲನೆ ನಡೆಸುತ್ತಿವೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.